ADVERTISEMENT

ಕೊರೊನಾ ಹೆಲ್ಮೆಟ್‌ ಧರಿಸಿ ರಸ್ತೆಗಿಳಿದ ಚೆನ್ನೈ ಪೊಲೀಸ್‌

ಏಜೆನ್ಸೀಸ್
Published 28 ಮಾರ್ಚ್ 2020, 11:37 IST
Last Updated 28 ಮಾರ್ಚ್ 2020, 11:37 IST
'ಕೊರೊನಾ ಹೆಲ್ಮೆಟ್‌' ಧರಿಸಿರುವ ಪೊಲೀಸ್‌ ಅಧಿಕಾರಿ
'ಕೊರೊನಾ ಹೆಲ್ಮೆಟ್‌' ಧರಿಸಿರುವ ಪೊಲೀಸ್‌ ಅಧಿಕಾರಿ    

ಚೆನ್ನೈ: ಕೊರೊನಾ ವೈರಸ್‌ ಸಾಂಕ್ರಾಮಿಕವಾಗುತ್ತಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚೆನ್ನೈನಲ್ಲಿ ಪೊಲೀಸ್‌ ಅಧಿಕಾರಿ 'ಕೊರೊನಾ ಹೆಲ್ಮೆಟ್‌' ಧರಿಸಿ, ರಸ್ತೆಯಲ್ಲಿ ಓಡಾಡುವವರ ಮುಂದೆ ಎದುರಾಗುತ್ತಿದ್ದಾರೆ.

ದೇಶವ್ಯಾಪಿ ಲಾಕ್‌ಡೌನ್‌ ಇದ್ದರೂ ಜನರು ಸಕಾರಣವಿಲ್ಲದೆ ಓಡಾಟ ನಡೆಸಿದ್ದಾರೆ. ಇದನ್ನು ತಡೆಯುವುದು ಹಾಗೂ ವೈರಸ್‌ ಸೋಂಕು ತಗಲುವ ಬಗ್ಗೆ ಜಾಗೃತಿ ಮೂಡಿಸುವುದು ಕೊರೊನಾ ಹೆಲ್ಮೆಟ್‌ ಉದ್ದೇಶವಾಗಿದೆ. ಜನರು ಮನೆಯಲ್ಲಿಯೇ ಉಳಿದರೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಅದಕ್ಕಾಗಿ ಪೊಲೀಸರು ಜನರ ಓಡಾಟ ತಡೆಯಲು ಶ್ರಮಿಸುತ್ತಿದ್ದಾರೆ.

ಗೌತಮ್‌ ಎಂಬ ಕಲಾವಿದ ಈ ಹೆಲ್ಮೆಟ್‌ ವಿನ್ಯಾಸಗೊಳಿಸಿದ್ದಾರೆ. 'ಕೋವಿಡ್‌–19 ಬಗ್ಗೆ ಜನರು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಜನರನ್ನು ನಿಯಂತ್ರಿಸಲು ಸಹಕಾರಿಯಾಗಲೆಂದು ಹಳೆಯ ಹೆಲ್ಮೆಟ್‌ ಮತ್ತು ಪೇಪರ್‌ ಬಳಸಿ ಕೊರೊನಾ ಹೆಲ್ಮೆಟ್‌ ಸಿದ್ಧ‍ಪಡಿಸಿದೆ. ಇದರೊಂದಿಗೆ ಜಾಗೃತಿ ಸಂದೇಶಗಳಿರುವ ಪ್ಲಕಾರ್ಡ್‌ಗಳನ್ನೂ ರೂಪಿಸಿ ಪೊಲೀಸರಿಗೆ ನೀಡಿದ್ದೇನೆ ' ಎಂದು ಹೇಳಿದ್ದಾರೆ.

ADVERTISEMENT

ಪೊಲೀಸ್‌ ಇನ್‌ಸ್ಪೆಕ್ಟರ್‌ ರಾಜೇಶ್‌ ಬಾಬು ಕೊರೊನಾ ಹೆಲ್ಮೆಟ್‌ ಧರಿಸಿ, ಪ್ರಯಾಣಿಕರಿಗೆ ಹೊರ ಬರದಂತೆ ತಿಳಿಸುತ್ತಿದ್ದಾರೆ. 'ಈ ಹೆಲ್ಮೆಟ್ ಕಂಡ ಕೂಡಲೇ ದಾರಿ ಹೋಕರಿಗೆ ಕೊರೊನಾ ಬಗ್ಗೆ ನೆನಪಾಗುತ್ತದೆ. ಆ ಬಗ್ಗೆ ಗಂಭೀರತೆಯೂ ತಿಳಿಯುತ್ತದೆ. ಮುಖ್ಯವಾಗಿ ಮಕ್ಕಳು ಬಹುಬೇಗ ಹೆಲ್ಮೆಟ್‌ ನೋಡಿ ಪ್ರತಿಕ್ರಿಯಿಸುತ್ತಾರೆ. ಅವರನ್ನು ಸುರಕ್ಷಿತವಾಗಿ ಮನೆಯಲ್ಲಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ತಿಳಿಸಲು ಸಹಕಾರಿಯಾಗಿದೆ' ಎಂದಿದ್ದಾರೆ.

ಮಾರ್ಚ್‌ 28ರಂದು ಬೆಳಗಿನ ಮಾಹಿತಿಯ ಪ್ರಕಾರ, 38 ಜನರಲ್ಲಿ ಕೋವಿಡ್‌–19 ದೃಢಪಟ್ಟಿದೆ. ಅದರಲ್ಲಿ 6 ಮಂದಿ ವಿದೇಶಿಯರೂ ಇದ್ದಾರೆ. ಈಗಾಗಲೇ ಸೋಂಕಿನಿಂದ ಒಬ್ಬ ವ್ಯಕ್ತಿ ಮೃತಪಟ್ಟಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.