ADVERTISEMENT

ಕೋವಿಡ್‌: ದೇಶದಾದ್ಯಂತ 344 ಪೊಲೀಸರು ಸಾವು, ಮಹಾರಾಷ್ಟ್ರದಲ್ಲಿ ಅಧಿಕ ಸೋಂಕಿತರು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 2:53 IST
Last Updated 27 ಆಗಸ್ಟ್ 2020, 2:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ವಿವಿಧ ರಾಜ್ಯಗಳ ಪೊಲೀಸ್ ಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ (ಸಿಎಪಿಎಫ್) 60,000ಕ್ಕಿಂತಲೂ ಹೆಚ್ಚು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೇಶದಾದ್ಯಂತ 340ಕ್ಕಿಂತಲೂ ಹೆಚ್ಚು ಪೊಲೀಸರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಪೊಲೀಸ್ ಫೌಂಡೇಷನ್ (ಐಪಿಎಫ್) ಅಂಕಿ ಅಂಶಗಳು ಹೇಳಿವೆ.

ದೆಹಲಿ ಮೂಲದ ಚಿಂತಕರ ಚಾವಡಿ ಆಗಿದೆ ಐಪಿಎಫ್. ಸಿಎಪಿಎಫ್‌ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್ ), ಇಂಡೊ ಟಿಬೆಟಿಯನ್ ಗಡಿ ಪೊಲೀಸ್ ( ಐಟಿಬಿಪಿ), ಅಸ್ಸಾಂ ರೈಫಲ್ಸ್( ಎಆರ್), ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್‌ಎಸ್‌ಜಿ) ಮತ್ತು ಸೌರಾಷ್ಟ್ರ ಸೀಮಾ ಬಲ್ (ಎಸ್‌ಎಸ್‌ಬಿ) ಪೊಲೀಸ್ ಪಡೆಗಳು ಸೇರಿವೆ.

ರಾಜ್ಯ ಪೊಲೀಸ್ ಪಡೆ ಮತ್ತು ಸಿಎಪಿಎಫ್‌ನಲ್ಲಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಜತೆಗೆ ಈ ರೋಗವನ್ನು ನಿಯಂತ್ರಿಸುವ ಕಾರ್ಯತಂತ್ರವನ್ನು ಚರ್ಚಿಸುವ ವೇದಿಕೆಯನ್ನೂ ಐಪಿಎಫ್ ಒದಗಿಸುತ್ತದೆ.

ADVERTISEMENT

ಐಪಿಎಫ್ ಅಂಕಿ ಅಂಶಗಳ ಪ್ರಕಾರ ಮಹಾರಾಷ್ಟ್ರ ಪೊಲೀಸ್, ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಜಾರ್ಖಂಡ್ ಪೊಲೀಸ್ ಪಡೆಯಲ್ಲಿಅತೀ ಹೆಚ್ಚು ಸಿಬ್ಬಂದಿಗಳಿಗೆ ಕೊರೊನಾವೈರಸ್ ಸೋಂಕು ತಗುಲಿದೆ.

ಮಾರ್ಚ್‌ನಲ್ಲಿ ಲಾಕ್‌ಡೌನ್ ಆರಂಭವಾದಾಗ ಪೊಲೀಸರ ದಿನ ನಿತ್ಯದ ಕರ್ತವ್ಯ ಜತೆಗೆ ಜನ ಸಂಚಾರ ನಿಯಂತ್ರಣ, ಸಂಪರ್ಕಗಳನ್ನು ಪತ್ತೆ ಹಚ್ಚಲು, ಕೋವಿಡ್ ಸೋಂಕಿತರಿಗೆ ಸೌಲಭ್ಯ ಒದಗಿಸಲು, ಲಾಕ್‍ಡೌನ್‌ನಿಂದಾಗಿ ಬೇರೆ ಪ್ರದೇಶಗಳಲ್ಲಿ ಸಿಲುಕಿಕೊಂಡವರನ್ನು ಮನೆಗೆ ತಲುಪಿಸುವುದು ಹೀಗೆ ಹೆಚ್ಚುವರಿ ಕೆಲಸಗಳ ಜವಾಬ್ದಾರಿಯನ್ನೂ ನೀಡಲಾಗಿತ್ತು.ಈ ರೀತಿಯ ಹೆಚ್ಚುವರಿ ಕೆಲಸಗಳಿಗೆ ಸಿಎಪಿಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಐಪಿಎಫ್‌ನ ಅಂಕಿ ಅಂಶಗಳ ಪ್ರಕಾರ ಇಲ್ಲಿಯವರೆಗೆ 60,528 ಪೊಲೀಸ್ ಸಿಬ್ಬಂದಿಗಳಿಗೆ ಸೋಂಕು ತಲುಪಿದೆ.344 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 14,189 ಪೊಲೀಸರಿಗೆ ಸೋಂಕು ತಗುಲಿದ್ದು, 144 ಮಂದಿ ಸಾವಿಗೀಡಾಗಿದ್ದಾರೆ.

ಇಲ್ಲಿಯವರೆಗೆ ಸಿಆರ್‌ಪಿಎಫ್ (6,855 ಸೋಂಕು ಪ್ರಕರಣಗಳು, 34 ಸಾವು), ಪಶ್ಚಿಮ ಬಂಗಾಳ (4,500 ಸೋಂಕು ಪ್ರಕರಣಗಳು, 27 ಸಾವು), ಬಿಎಸ್‌ಎಫ್ (4,030 ಸೋಂಕು ಪ್ರಕರಣಗಳು, 14 ಸಾವು) ಮತ್ತು ಜಾರ್ಖಂಡ್ (3,640 ಸೋಂಕು ಪ್ರಕರಣಗಳು, 7 ಸಾವು) ವರದಿಯಾಗಿವೆ.ಶೇಕಡಾವಾರು ನೋಡಿದರೆ ಮಹಾರಾಷ್ಟ್ರದಲ್ಲಿ ಶೇ. 6.4, ಆಂಧ್ರ ಪ್ರದೇಶದಲ್ಲಿ ಶೇ.5.8 ಮತ್ತು ಅಸ್ಸಾಂನಲ್ಲಿ ಶೇ. 5.1 ಸೋಂಕಿತರಿದ್ದಾರೆ. ಸುಮಾರು 25,000ಕ್ಕಿಂತಲೂ ಹೆಚ್ಚು ಸಿಬ್ಬಂದಿಗಳು ಈಗ ಕ್ವಾರಂಟೈನ್‌ನಲ್ಲಿದ್ದಾರೆ.

14 ರಾಜ್ಯಗಳಲ್ಲಿ 1,000 ಕ್ಕಿಂತಲೂ ಹೆಚ್ಚು ಪೊಲೀಸರಿಗೆ ಕೋವಿಡ್ ಸೋಂಕು ಇದೆ. ಈ ಪೈಕಿ ನಾಲ್ಕು ರಾಜ್ಯಗಳಲ್ಲಿ 4,000ಕ್ಕಿಂತಲೂ ಹೆಚ್ಚು ಸೋಂಕಿತರಿದ್ದಾರೆ ಎಂದು ಸಿಎಪಿಎಫ್‌ನ ಹಿರಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಕೋವಿಡ್ ಕರ್ತವ್ಯ ಆರಂಭವಾದಂದಿನಿಂದ ಪೊಲೀಸರನ್ನು ನಿಯೋಜನೆ ಮಾಡುವಾಗ ಹೊಸ ಕಾರ್ಯಾಚರಣೆ ಪ್ರಕ್ರಿಯೆಯನ್ನು ಪಾಲಿಸಲಾಗಿದೆ. ಅಂದರೆ ಸೋಂಕು ತಗುಲದಂತೆ ಹೆಚ್ಚಿನ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.