ADVERTISEMENT

ಗಾಜು, ಪ್ಲಾಸ್ಟಿಕ್‌ ಮೇಲೆ ಕೊರೊನಾ ವೈರಸ್‌ ಆಯುಷ್ಯ ಅಧಿಕ: ಐಐಟಿ ಅಧ್ಯಯನ

ಪಿಟಿಐ
Published 15 ಫೆಬ್ರುವರಿ 2021, 9:46 IST
Last Updated 15 ಫೆಬ್ರುವರಿ 2021, 9:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೇಪರ್, ಬಟ್ಟೆಗಳಂತಹ ರಂದ್ರಗಳಿರುವ ವಸ್ತುಗಳಿಗಿಂತ ಗಾಜು, ಪ್ಲಾಸ್ಟಿಕ್‌ನಂತಹ ಒಳತೂರಲು ಸಾಧ್ಯವಿಲ್ಲದ ವಸ್ತುಗಳ ಮೇಲೆ ಕೊರೊನಾ ವೈರಸ್‌ ಹೆಚ್ಚು ಸಮಯ ಬದುಕಿರಬಲ್ಲದು ಎಂದು ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಅಧ್ಯಯನವೊಂದು ಕಂಡುಕೊಂಡಿದೆ.

‘ಸಾರ್ಸ್‌–ಕೋವ್‌–2 ವೈರಾಣುವಿನಿಂದಾಗಿ ಉಂಟಾಗುವ ಕೋವಿಡ್‌–19, ಬಾಯಿ ಅಥವಾ ಮೂಗಿನಿಂದ ಹೊರಬೀಳುವ ದ್ರವಕಣಗಳಿಂದಾಗಿ ಹರಡುತ್ತದೆ. ಈ ದ್ರವಕಣಗಳು ವಸ್ತುಗಳ ಮೇಲ್ಮೈ ಪದರಗಳ ಮೂಲಕ ಇತರರಿಗೆ ಹರಡುತ್ತದೆ. ಹೀಗಾಗಿ ಯಾವ ವಸ್ತುಗಳ ಮೇಲೆ ಈ ದ್ರವಕಣಗಳು ಹೆಚ್ಚು ಹೊತ್ತು ಇರುತ್ತವೆ ಎಂದು ತುಲನೆ ಮಾಡುವುದಕ್ಕಾಗಿ ನಡೆದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಪೇಪರ್‌, ಬಟ್ಟೆಗಳಂತಹ ರಂದ್ರಗಳಿರುವ ವಸ್ತುಗಳಲ್ಲಿ ದ್ರವಕಣಗಳು ಬೇಗ ಒಣಗಿದರೆ, ಪ್ಲಾಸ್ಟಿಕ್‌, ಗಾಜು, ಸ್ಟೀಲ್‌ನಂತಹ ವಸ್ತುಗಳ ಮೇಲಿನ ದ್ರವಕಣಗಳು ಬೇಗ ಒಣಗುವುದಿಲ್ಲ ಎಂಬುದನ್ನು ದೃಢಪಡಿಸಿಕೊಂಡ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.

ADVERTISEMENT

‘ಪೇಪರ್ ಮೇಲೆ ಕೊರೊನಾ ವೈರಸ್‌ ಹೆಚ್ಚೆಂದರೆ ಮೂರು ಗಂಟೆ ಜೀವದಲ್ಲಿ ಇರಬಹುದು, ಬಟ್ಟೆಯ ಮೇಲೆ ಗರಿಷ್ಠ 2 ದಿನ ಇರಬಹುದು. ಆದರೆ ಗಾಜಿನ ಮೇಲೆ 4 ದಿನ, ಪ್ಲಾಸ್ಟಿಕ್‌, ಸ್ಟೀಲ್‌ ವಸ್ತುಗಳ ಮೇಲೆ 7 ದಿನಗಳ ವರೆಗೆ ವೈರಸ್ ಜೀವದಲ್ಲಿರಬಹುದು. ಸಂಘಮಿತ್ರೊ ಚಟರ್ಜಿ ನೇತೃತ್ವದ ಅಧ್ಯಯನ ತಂಡ ಹೇಳಿದೆ. ‘ಫಿಸಿಕ್ಸ್‌ ಆಫ್‌ ಫ್ಲೂಯಿಡ್ಸ್‌’ ನಿಯತಕಾಲಿಕದಲ್ಲಿ ಇದು ಪ್ರಕಟವಾಗಿದೆ.

‘ಸಾರ್ವಜನಿಕ ಸ್ಥಳಗಳು, ಆಸ್ಪತ್ರೆ, ಕಚೇರಿಗಳಲ್ಲಿರುವ ಗಾಜು, ಸ್ಟೀಲ್‌ ವಸ್ತುಗಳನ್ನು ಬಟ್ಟೆಯಿಂದ ಮುಚ್ಚಿಡುವುದು ಒಳಿತು. ಇದರಿಂದಾಗಿ ವಸ್ತುಗಳಿಂದ ಸೋಂಕು ಪ್ರಸರಣವಾಗದಂತೆ ತಡೆಯಬಹುದು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.