ADVERTISEMENT

ಭ್ರಷ್ಟಾಚಾರ ಆರೋಪ: ವಿಚಾರಣೆಗೆ ಹಾಜರಾಗಲು ದೇಶಮುಖ್‌ ಆಪ್ತಸಹಾಯಕರಿಗೆ ಸೂಚನೆ

ತನಿಖೆ ಚುರುಕುಗೊಳಿಸಿರುವ ಸಿಬಿಐ

ಪಿಟಿಐ
Published 11 ಏಪ್ರಿಲ್ 2021, 6:51 IST
Last Updated 11 ಏಪ್ರಿಲ್ 2021, 6:51 IST
ಅನಿಲ್‌ ದೇಶಮುಖ್‌
ಅನಿಲ್‌ ದೇಶಮುಖ್‌   

ನವದೆಹಲಿ: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರ ಆಪ್ತ ಸಹಾಯಕರಿಗೆ ಸಿಬಿಐ ಭಾನುವಾರ ಸೂಚಿಸಿದೆ.

ಹಿರಿಯ ಐಪಿಎಸ್‌ ಅಧಿಕಾರಿ ಮತ್ತು ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್‌ ಸಿಂಗ್‌ ಅವರು ದೇಶಮುಖ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಬಾಂಬೆ ಹೈಕೋರ್ಟ್‌ ಈ ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು.

ಮಂಗಳವಾರದಿಂದ ತನಿಖೆ ಆರಂಭಿಸಿರುವ ಸಿಬಿಐ, ದೆಹಲಿಯಿಂದ ಅಧಿಕಾರಿಗಳ ತಂಡವನ್ನು ಮುಂಬೈಗೆ ಕಳುಹಿಸಿದೆ.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ದೇಶಮುಖ್‌ ಅವರ ಆಪ್ತ ಸಹಾಯಕರಾದ ಸಂಜೀವ್‌ ಪಾಲಾಂದೆ ಮತ್ತು ಕುಂದನ್‌ ಅವರಿಗೆ ಸೂಚಿಸಲಾಗಿದೆ.

ಮುಂಬೈನಲ್ಲಿನ ಬಾರ್‌ ಮತ್ತು ರೆಸ್ಟೊರೆಂಟ್‌ಗಳಿಂದ ಪ್ರತಿ ತಿಂಗಳು ₹100 ಕೋಟಿ ವಸೂಲಿ ಮಾಡುವಂತೆ ದೇಶಮುಖ್‌ ಅವರು ಸದ್ಯ ಬಂಧನದಲ್ಲಿರುವ ಸಚಿನ್‌ ವಾಜೆಗೆ ಸೂಚಿಸಿದ್ದ ಸಂದರ್ಭದಲ್ಲಿ ಪಾಲಾಂದೆ ಹಾಜರಿದ್ದರು ಎಂದು ಪರಮ್‌ ಬೀರ್‌ ಸಿಂಗ್‌ ಅವರು ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದರು.

ಇದೇ ರೀತಿಯ ಒಂದು ವಿಷಯದ ಚರ್ಚೆ ಸಂದರ್ಭದಲ್ಲಿ ಕುಂದನ್‌ ಸಹ ಹಾಜರಿದ್ದರು ಎಂದು ವಾಜೆ ಹೇಳಿಕೆ ನೀಡಿದ್ದಾರೆ.

ಸಿಬಿಐ ಈಗಾಗಲೇ ವಾಜೆ, ಪರಮ್‌ ಬೀರ್‌ ಸಿಂಗ್‌ ಮತ್ತು ಇತರ ಅಧಿಕಾರಿಗಳ ವಿಚಾರಣೆಯನ್ನು ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.