ADVERTISEMENT

Nagpur violence | ಗಲಭೆಕೋರರಿಂದಲೇ ನಷ್ಟ ವಸೂಲಿ: ದೇವೇಂದ್ರ ಫಡಣವೀಸ್

ಪಿಟಿಐ
Published 22 ಮಾರ್ಚ್ 2025, 10:35 IST
Last Updated 22 ಮಾರ್ಚ್ 2025, 10:35 IST

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್    

ನಾಗ್ಪುರ:  ‘ನಾಗ್ಪುರ ಹಿಂಸಾಚಾರದಲ್ಲಿ ಹಾನಿಗೊಳಗಾದ ಸಾರ್ವಜನಿಕ ಆಸ್ತಿಗಳ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲಾಗುವುದು. ಹಣ ಪಾವತಿಸಲಿಲ್ಲ ಎಂದಾದರೆ ಅಂಥವರ ಆಸ್ತಿಗಳನ್ನು ಮಾರಾಟ ಮಾಡಿ ಅಥವಾ ಜಪ್ತಿ ಮಾಡಿ ಹಣ ಪಡೆಯಲಾಗುವುದು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಶನಿವಾರ ಹೇಳಿದರು.

ಹಿಂಸಾಚಾರ ನಡೆದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ನಾಗ್ಪುರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗೋಷ್ಠಿ ನಡೆಸಿದರು.

‘ಪರಿಸ್ಥಿತಿಗೆ ತುಪ್ಪ ಸುರಿಯುವ ಕೆಲಸ ಮಾಡಿದ ಸಾಮಾಜಿಕ ಜಾಲತಾಣಗಳ 68 ಖಾತೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಅಳಿಸಿ ಹಾಕಲಾಗಿದೆ. ಇಂಥ ಪೋಸ್ಟ್‌ಗಳನ್ನು ಹಂಚಿಕೊಂಡವರನ್ನೂ ಆರೋಪಿಗಳನ್ನಾಗಿ ಮಾಡಲಾಗುವುದು. ಹಿಂಸಾಚಾರದಲ್ಲಿ ವಿದೇಶಿಯರ ಅಥವಾ ಬಾಂಗ್ಲಾದೇಶಿಯರ ಕೈವಾಡವಿದೆ ಎಂಬುದರ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದರು.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟನೆ ಕುರಿತು ಸಿಸಿಟಿವಿ ಕ್ಯಾಮೆರಾಗಳ ವಿಡಿಯೊಗಳು ಮತ್ತು ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಈವರೆಗೆ 104 ಗಲಭೆಕೋರರನ್ನು ಗುರುತಿಸಲಾಗಿದೆ. 12 ಅಪ್ರಾಪ್ತ ವಯಸ್ಕರು ಸೇರಿದಂತೆ 92 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ನಾಗ್ಪುರ ಹಿಂಸಾಚಾರದ ವೇಳೆ ಹಾನಿಗೊಳಗಾದ ಆಸ್ತಿಗಳ ಬೆಲೆಯನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು. ಪಾವತಿಸಲು ವಿಫಲವಾದರೆ ನಷ್ಟವನ್ನು ಭರಿಸಲು ಅವರ ಆಸ್ತಿಗಳನ್ನು ವಶಪಡಿಸಿಕೊಂಡು ಮಾರಾಟ ಮಾಡಲಾಗುತ್ತದೆ’ ಎಂದು ಫಡಣವೀಸ್‌ ಹೇಳಿದ್ದಾರೆ.

‘ಹಿಂಸಾಚಾರದ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗಲಭೆಕೋರರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವವರೆಗೆ ನಮ್ಮ ಸರ್ಕಾರ ವಿರಮಿಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ನಡೆಸಿದ ಪ್ರತಿಭಟನೆ ವೇಳೆ ಪವಿತ್ರ ಬರಹಗಳು ಇರುವ ‘ಚಾದರ್’ ಸುಟ್ಟುಹಾಕಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಮಾರ್ಚ್ 17ರಂದು ನಾಗ್ಪುರದ ಹಲವಾರು ಭಾಗಗಳಲ್ಲಿ ದೊಡ್ಡ ಪ್ರಮಾಣದ ಕಲ್ಲು ತೂರಾಟ ನಡೆದಿತ್ತು. ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು.

ತಪ್ಪು ಮಾಡಿದವರನ್ನು ಬಿಡುವುದೇ ಇಲ್ಲ. ಮಹಾರಾಷ್ಟ್ರ ಸರ್ಕಾರಕ್ಕೆ ತನ್ನದೇ ಆದ ಶೈಲಿಯೊಂದಿದೆ. ಅಗತ್ಯ ಬಿದ್ದರೆ, ಬುಲ್ಡೋಜರ್‌ ಕಾರ್ಯಪ್ರವೃತ್ತವಾಗಲಿದೆ
ದೇವೇಂದ್ರ ಫಡಣವೀಸ್‌, ಮಹಾರಾಷ್ಟ್ರ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.