ನವದೆಹಲಿ: ಈಗಾಗಲೇ 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತವು ಕಷ್ಟಪಡುತ್ತಿದೆ. ಇಂಥ ಸಂದರ್ಭದಲ್ಲಿ ವಿಶ್ವದಾದ್ಯಂತ ಇರುವ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಭಾರತವೇನೂ ಧರ್ಮಶಾಲೆಯಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಶ್ರೀಲಂಕಾ ಪ್ರಜೆಯೊಬ್ಬರು ತಮ್ಮ ಗಡೀಪಾರು ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ನಡೆಸಿತು.
ಒಂದು ವೇಳೆ ಭಾರತವು ವಿಶ್ವದಲ್ಲಿರುವ ನಿರಾಶ್ರಿತರಿಗೆ ಆಶ್ರಯ ನೀಡಲು ಮುಂದಾದಲ್ಲಿ, ನೆರೆಯ ರಾಷ್ಟ್ರಗಳಿಂದ ನಿರಾಶ್ರಿತರ ಮಹಾಪೂರವೇ ಹರಿದುಬರಲಿದೆ ಎಂದು ಪೀಠ ಹೇಳಿದೆ.
ಶ್ರೀಲಂಕಾದ ಭಯೋತ್ಪಾದಕ ಸಂಘಟನೆ ಎಲ್‌ಟಿಟಿಇಯ ಜೊತೆ ನಂಟು ಹೊಂದಿದ ಶಂಕೆ ಮೇರೆಗೆ ಶ್ರೀಲಂಕಾದ ಪ್ರಜೆಯನ್ನು 2015ರಲ್ಲಿ ಬಂಧಿಸಲಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ(ಯುಎಪಿಎ) ಆತ ತಪ್ಪಿತಸ್ಥ ಎಂದು ಸಾಬೀತಾಗಿತ್ತು. ಹೀಗಾಗಿ, ಈತನಿಗೆ ನ್ಯಾಯಾಲಯವು 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿತ್ತು.
2022ರಲ್ಲಿ ಈತನ ಶಿಕ್ಷೆ ಅವಧಿಯನ್ನು 10 ವರ್ಷದಿಂದ 7 ವರ್ಷಕ್ಕೆ ಇಳಿಸಿದ್ದ ಮದ್ರಾಸ್ ಹೈಕೋರ್ಟ್, ಶಿಕ್ಷೆಯ ಅವಧಿ ಮುಗಿದ ಕೂಡಲೇ ದೇಶ ತೊರೆಯಬೇಕು ಎಂದು ಸೂಚಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.