ADVERTISEMENT

ನಿರ್ದಿಷ್ಟ ಯೋಜನೆ ಜಾರಿಗೆ ರಾಜ್ಯಗಳಿಗೆ ನಿರ್ದೇಶನ ನೀಡಲಾಗದು: ಸುಪ್ರೀಂ ಕೋರ್ಟ್‌

ಪಿಟಿಐ
Published 23 ಫೆಬ್ರುವರಿ 2024, 15:53 IST
Last Updated 23 ಫೆಬ್ರುವರಿ 2024, 15:53 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಸರ್ಕಾರದ ನೀತಿಗೆ ಸಂಬಂಧಿಸಿರುವ ವಿಚಾರವನ್ನು ಪರಿಶೀಲಿಸುವಲ್ಲಿ ನ್ಯಾಯಾಂಗದ ವ್ಯಾಪ್ತಿಯು ಸೀಮಿತವಾಗಿದೆ ಮತ್ತು ನಿರ್ದಿಷ್ಟ ಯೋಜನೆ ಅಥವಾ ನೀತಿಯನ್ನು ಜಾರಿಗೊಳಿಸುವಂತೆ ನ್ಯಾಯಾಲಯಗಳು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ಅಪೌಷ್ಟಿಕತೆ ನಿವಾರಣೆಗಾಗಿ ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಲೇವಾರಿ ಮಾಡುವ ವೇಳೆ ನ್ಯಾಯಾಲಯ‌ವು ಈ ಹೇಳಿಕೆ ನೀಡಿದೆ.

ADVERTISEMENT

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಮತ್ತು ಇತರ ಕಲ್ಯಾಣ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿರುವುದರಿಂದ ಈ ವಿಚಾರವಾಗಿ ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ  ಮತ್ತು ಪಂಕಜ್‌ ಮಿತ್ತಲ್‌ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

ಸರ್ಕಾರಗಳ ನೀತಿಯ ಕಾನೂನುಬದ್ಧತೆ ಮಾತ್ರ ನ್ಯಾಯಾಂಗದ ಪರಿಶೀಲನೆಯ ವಿಷಯವಾಗಿದೆ ಎಂದೂ ಪ್ರತಿಪಾದಿಸಿದೆ.

ಸಾಮಾಜಿಕ ಕಾರ್ಯಕರ್ತರಾದ ಅನುನ್‌ ಧವನ್‌, ಇಶಾನ್‌ ಸಿಂಗ್‌ ಮತ್ತು ಕುನಾಜನ್ ಸಿಂಗ್‌ ಅವರು ಪಿಐಎಲ್‌ ಸಲ್ಲಿಸಿದ್ದರು. ಐದು ವರ್ಷದದೊಳಗಿನ ಹಲವು ಮಕ್ಕಳು ಪ್ರತಿದಿನ ಹಸಿವು ಮತ್ತು ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ ಎಂದು ಅವರು ಅರ್ಜಿಯಲ್ಲಿ  ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.