ADVERTISEMENT

ರೂಪಾಂತರಿತ ಕೊರೊನಾ ವೈರಸ್‌ ವಿರುದ್ಧವೂ ಕೋವ್ಯಾಕ್ಸಿನ್‌ ಪರಿಣಾಮಕಾರಿ

ಭಾರತ್‌ ಬಯೋಟೆಕ್‌, ಐಸಿಎಂಆರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 15:30 IST
Last Updated 27 ಜನವರಿ 2021, 15:30 IST
ಲಸಿಕೆ
ಲಸಿಕೆ   

ಹೈದರಾಬಾದ್‌: ಕೋವಿಡ್‌–19 ವಿರುದ್ಧದ ಲಸಿಕೆ ಕೋವ್ಯಾಕ್ಸಿನ್‌, ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿತ ಕೊರೊನಾ ವೈರಸ್ಅನ್ನು ಸಹ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಲಸಿಕೆ ತಯಾರಕ ಕಂಪನಿ ಭಾರತ್‌ ಬಯೋಟೆಕ್‌ ಬುಧವಾರ ಹೇಳಿದೆ.

ಭಾರತ್‌ ಬಯೋಟೆಕ್‌ನ ಈ ಹೇಳಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ಕೂಡ ಪುನರುಚ್ಚರಿಸಿದೆ. ‘ರೂಪಾಂತರಿತ ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಬೇಕಾದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಶಕ್ತಿಯನ್ನು ಕೋವ್ಯಾಕ್ಸಿನ್‌ ಹೊಂದಿದೆ. ಹೀಗಾಗಿ ಕೋವ್ಯಾಕ್ಸಿನ್‌ ಸಾಮರ್ಥ್ಯ ಕುರಿತು ಇದ್ದ ಅನಿಶ್ಚಿತತೆಯನ್ನು ಹೋಗಲಾಡಿಸಿದಂತಾಗಿದೆ’ ಎಂದು ಐಸಿಎಂಆರ್‌ ಹೇಳಿದೆ.

ಐಸಿಎಂಆರ್‌ ಸಹಯೋಗದಲ್ಲಿ ಭಾರತ್‌ ಬಯೋಟೆಕ್‌ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ADVERTISEMENT

‘ರೂಪಾಂತರಿತ ವೈರಸ್‌ನ ಸಂರಚನೆಯನ್ನು ಪುಣೆಯಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಯಲ್ಲಿ ಅಧ್ಯಯನ ಮಾಡಲಾಗಿದೆ. ಅದನ್ನು ಪ್ರತ್ಯೇಕಿಸಿ, ಯಶಸ್ವಿಯಾಗಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವಿಶ್ವದಲ್ಲಿಯೇ ಮೊದಲ ಸಹ ಇಂಥ ಪ್ರಯತ್ನ ನಡೆದಿದೆ’ ಎಂದು ಐಸಿಎಂಆರ್‌ ತಿಳಿಸಿದೆ.

'ಕೋವ್ಯಾಕ್ಸಿನ್‌ ಲಸಿಕೆ ನೀಡಲಾದ ವ್ಯಕ್ತಿಗಳ ರಕ್ತವನ್ನು ಸಹ ವಿಶ್ಲೇಷಿಸಲಾಗಿದೆ. ಅವರಲ್ಲಿ ರೋಗನಿರೋಧಕ ಶಕ್ತಿಯು ಶೇ 99.6 ರಷ್ಟು ವೃದ್ಧಿಯಾಗಿದ್ದು, ಬ್ರಿಟನ್‌ನಲ್ಲಿ ಕಂಡು ಬಂದ ಈ ರೂಪಾಂತರಿತ ವೈರಸ್‌ಅನ್ನು ನಿಷ್ಕ್ರಿಯಗೊಳಿಸಿರುವುದು ಸಾಬೀತಾಗಿದೆ’ ಎಂದೂ ತಿಳಿಸಿದೆ.

ದೇಶದಲ್ಲಿ 150ಕ್ಕೂ ಅಧಿಕ ಜನರಲ್ಲಿ ಈ ರೂಪಾಂತರಿತ ಕೊರೊನಾ ವೈರಸ್‌ನ ಸೋಂಕು ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.