ADVERTISEMENT

ಕ್ಯಾಲಿಕಟ್‌ನಿಂದ ಪ್ಯಾರಿಸ್‌ಗೆ: ನೀರಜ್‌ ಅಭಿಮಾನಿಯ 22,000 ಕಿ.ಮೀ. ಸೈಕಲ್ ಯಾತ್ರೆ

ಪಿಟಿಐ
Published 29 ಜುಲೈ 2024, 13:23 IST
Last Updated 29 ಜುಲೈ 2024, 13:23 IST
<div class="paragraphs"><p>ಪ್ಯಾರಿಸ್‌ನಲ್ಲಿ&nbsp;ಫಯಿಸ್ ಅಶ್ರಫ್ ಅಲಿ&nbsp;</p></div>

ಪ್ಯಾರಿಸ್‌ನಲ್ಲಿ ಫಯಿಸ್ ಅಶ್ರಫ್ ಅಲಿ 

   

ಫೇಸ್‌ಬುಕ್ ಖಾತೆಯ ಚಿತ್ರ

ಪ್ಯಾರಿಸ್‌: ಜಾವ್ಲಿನ್ ಪಟು ನೀರಜ್ ಚೋಪ್ರಾ ಅವರನ್ನು ಒಲಿಂಪಿಕ್ಸ್‌ನಲ್ಲಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಕೇರಳದ ಕ್ಯಾಲಿಕಟ್‌ನ ಫಯೀಸ್ ಅಶ್ರಫ್ ಅಲಿ ಎಂಬುವವರು ಬರೋಬ್ಬರಿ 22 ಸಾವಿರ ಕಿ.ಮೀ. ಸೈಕಲ್ ತುಳಿದು ಪ್ಯಾರಿಸ್ ತಲುಪಿದ್ದಾರೆ. ಇದಕ್ಕಾಗಿ ಇವರು ತೆಗೆದುಕೊಂಡ ಸಮಯ 2 ವರ್ಷ.

ADVERTISEMENT

ಕ್ಯಾಲಿಕಟ್‌ನ ಫಯಿಸ್‌ ಅಶ್ರಫ್‌ ಅಲಿ ಎನ್ನುವವರು 2022ರ ಆಗಸ್ಟ್‌ 15 ರಂದು ಸೈಕಲ್‌ ಏರಿ ಪ್ರಯಾಣ ಆರಂಭಿಸಿ ಬರೋಬ್ಬರಿ 30 ದೇಶಗಳನ್ನು ದಾಟಿ ಇದೀಗ ಪ್ಯಾರಿಸ್‌ ತಲುಪಿದ್ದಾರೆ. ಅಶ್ರಫ್‌ ಅವರು ‘ಭಾರತದಿಂದ ಲಂಡನ್‌ಗೆ–ಶಾಂತಿ ಮತ್ತು ಏಕತೆಯನ್ನು ಹರಡಬೇಕು’ ಎನ್ನುವ ಗುರಿಯನ್ನು ಹೊಂದಿದ್ದರು. 

ಕಳೆದ ವರ್ಷ 2023ರ ಆಗಸ್ಟ್‌ನಲ್ಲಿ 17 ದೇಶಗಳನ್ನು ದಾಟಿ ಬುಡಾಪೆಸ್ಟ್ ತಲುಪಿದ್ದರು. ಆ ಸಮಯದ‌ಲ್ಲಿ ನೀರಜ್‌ ಚೋಪ್ರಾ ಅಲ್ಲಿಯೇ ಇರುವ ಬಗ್ಗೆ ತಿಳಿದು ತಕ್ಷಣವೇ ಕೇರಳ ಮೂಲದ ಹಲವು ಕ್ರೀಡಾ ತರಬೇತುದಾರರಿಗೆ ಕರೆ ಮಾಡಿ ನೀರಜ್‌ ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು, ಅದರಂತೆ ನೀರಜ್‌ ಅವರನ್ನು ಭೇಟಿಯಾಗಲು ಸಫಲರಾಗಿದ್ದರು

ನೀರಜ್‌ರೊಂದಿಗೆ ಮಾತನಾಡುವ ವೇಳೆ, ‘ನೀವು ಹೇಗಿದ್ದರೂ ಲಂಡನ್‌ಗೆ ಹೋಗುತ್ತಿದ್ದೀರಿ, 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಿ ಎಂದು ಆಹ್ವಾನ ನೀಡಿದರು. ಹೀಗಾಗಿ ನನ್ನ ಸುದೀರ್ಘ ಪ್ರಯಾಣದಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡು ಪ್ಯಾರಿಸ್‌ಗೆ ಬಂದಿದ್ದೇನೆ’ ಎಂದು ಅಶ್ರಫ್‌ ಪಿಟಿಐಗೆ ತಿಳಿಸಿದ್ದಾರೆ.

ಅಶ್ರಫ್‌ ಅವರು ನಾಲ್ಕು ಜೊತೆ ಬಟ್ಟೆ, ಒಂದು ಟೆಂಟ್‌, ಮಲಗಲು ಅಗತ್ಯವಿರುವ ವಸ್ತು ಮತ್ತು ಒಂದು ಮ್ಯಾಟ್‌ಅನ್ನು ಜೊತೆಯಿರಿಸಿಕೊಂಡಿದ್ದಾರೆ. 

‘ನಾನು ಯಾವುದೇ ಹೋಟೆಲ್‌ನಲ್ಲಿ ಈವರೆಗೂ ತಂಗಿಲ್ಲ. ಈ ಪ್ರಯಾಣದಲ್ಲಿ ಕೆಲವು ಪ್ರಾಯೋಜಕರ ನೆರವನ್ನು ಪಡೆದಿದ್ದೇನೆ ಅಷ್ಟೆ. ಈ ಸೈಕಲ್‌ ಸವಾರಿಯ ನಡುವೆ ವೀಸಾಗಾಗಿ ಎರಡು ಬಾರಿ ಕೇರಳಕ್ಕೆ ವಿಮಾನ ಮೂಲಕ ಹೋಗಿ ಬಂದಿದ್ದೆ.

'ಈವರೆಗೆ ನನಗೆ ಎಂದಿಗೂ ಸುಸ್ತು, ಅನಾರೋಗ್ಯ ಕಾಡಿಲ್ಲ. ಜನರು ತೋರಿಸುವ ಪ್ರೀತಿ ಮತ್ತು ಆತ್ಮೀಯತೆಯೊಂದಿಗೆ ಸಾಗುತ್ತಿದ್ದೇನೆ. ಈ ಪ್ರಯಾಣಕ್ಕಾಗಿ ₹2.5ಲಕ್ಷ ಬೆಲೆಯ ಸೈಕಲ್‌ ಖರೀದಿಸಿದ್ದೆ. ಒಂದು ದಿನಕ್ಕೆ ಸರಾಸರಿ 150 ಕಿ.ಮೀ. ಪ್ರಯಾಣಿಸುತ್ತಿದ್ದೆ. ಕೊನೆಗೂ ಪ್ಯಾರಿಸ್‌ ತಲುಪಿದ್ದೇನೆ. ನೀರಜ್‌ ಚೋಪ್ರಾ ಅವರನ್ನು ಹುರಿದುಂಬಿಸಲು ಕಾತುರನಾಗಿದ್ದೇನೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಅಶ್ರಫ್ ಅಲಿ ಅವರು ವೃತ್ತಿಯಿಂದ ಎಂಜಿನಿಯರ್ ಆಗಿದ್ದಾರೆ. ನಾಲ್ಕು ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ಕಾರ್ಯನಿರ್ವಹಿಸಿದ್ದರು. ಹೃದ್ರೋಗಿಯಾಗಿರುವ ತಂದೆಯ ಆರೈಕೆಗಾಗಿ 2015ರಲ್ಲಿ ಕೇರಳಕ್ಕೆ ಮರಳಿದ್ದರು. ಅವರ ತಂದೆ 2018ರಲ್ಲಿ ನಿಧನರಾದರು. ಕ್ಯಾಲಿಕಟ್‌ನಲ್ಲಿ ಅಶ್ರಫ್ ಅವರು ತಮ್ಮ ಪತ್ನಿ (ವೈದ್ಯಕೀಯ ವೃತ್ತಿಯಲ್ಲಿದ್ದಾರೆ) ಮತ್ತು ಇಬ್ಬರು ಪುತ್ರರೊಂದಿಗೆ ನೆಲೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.