ADVERTISEMENT

ಕೋವಿಡ್ ಲಸಿಕೆಯ ಎರಡನೇ, ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರ 6 ತಿಂಗಳಿಗೆ ಇಳಿಕೆ

ಪಿಟಿಐ
Published 6 ಜುಲೈ 2022, 14:53 IST
Last Updated 6 ಜುಲೈ 2022, 14:53 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ಕೋವಿಡ್ ಲಸಿಕೆಯ ಮುನ್ನೆಚ್ಚರಿಕಾ ಡೋಸ್‌ ಪಡೆಯುವ ಅಂತರವನ್ನು 9 ತಿಂಗಳಿನಿಂದ(39 ವಾರ) 6 ತಿಂಗಳಿಗೆ (26 ವಾರ) ಇಳಿಕೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.

ತಜ್ಞರ ಸಮಿತಿಯ ಶಿಫಾರಸು ಆಧರಿಸಿ, 18–59 ವರ್ಷದ ಎಲ್ಲ ಫಲಾನುಭವಿಗಳಿಗೆ ಎರಡನೇ ಡೋಸ್ ಪಡೆದ 6 ತಿಂಗಳು ಅಥವಾ 26 ವಾರಗಳ ಬಳಿಕ ಬೂಸ್ಟರ್ ಡೋಸ್ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

‘ಬದಲಾಗುತ್ತಿರುವ ವೈಜ್ಞಾನಿಕ ಪುರಾವೆಗಳು ಮತ್ತು ಜಾಗತಿಕ ಅಭ್ಯಾಸಗಳ ದೃಷ್ಟಿಯಿಂದ, ಲಸಿಕೆಗೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ)ಯ ತಾಂತ್ರಿಕ ಉಪ ಸ್ಥಾಯಿ ಸಮಿತಿಯು (ಎಸ್‌ಟಿಎಸ್‌ಸಿಐ) ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕೆ ಡೋಸ್ ನಡುವಿನ ಅಂತರವನ್ನು ಪರಿಷ್ಕರಿಸಲು ಶಿಫಾರಸು ಮಾಡಿದೆ. 6 ತಿಂಗಳು ಅಥವಾ 26 ವಾರಗಳ ನಂತರ ಬೂಸ್ಟರ್ ಡೋಸ್ ನೀಡಲು ಎನ್‌ಟಿಎಜಿಐ ಅನುಮೋದಿಸಿದೆ’ ಎಂದು ಸಚಿವಾಲಯ ಹೇಳಿದೆ.

ADVERTISEMENT

‘ಆದ್ದರಿಂದ 2 ನೇ ಡೋಸ್ ಪಡೆದು 6 ತಿಂಗಳು ಅಥವಾ 26 ವಾರ ಪೂರ್ಣಗೊಂಡಿರುವ 18-59 ವರ್ಷದ ಎಲ್ಲಾ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ಅನ್ನು ನೀಡಲು ನಿರ್ಧರಿಸಲಾಗಿದೆ’ ಎಂದು ರಾಜ್ಯಗಳಿಗೆ ಬರೆದ ಪತ್ರದಲ್ಲಿ ಸಚಿವಾಲಯ ತಿಳಿಸಿದೆ.

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಫಲಾನುಭವಿಗಳಿಗೆ ಹಾಗೂ ಆರೋಗ್ಯ ಕಾರ್ಯಕರ್ತರು, ಮುಂಚೂಣೆ ಕಾರ್ಯಕರ್ತರಿಗೆ 2ನೇ ಡೋಸ್ ಪಡೆದು 6 ತಿಂಗಳು ಅಥವಾ 26 ವಾರಗಳು ಪೂರ್ಣಗೊಂಡ ಬಳಿಕ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲಾಗುವುದು ಎಂದೂ ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.