ADVERTISEMENT

ಕೋವಿಡ್‌: ಏಳು ರಾಜ್ಯಗಳಿಗೆ ಕೇಂದ್ರದ ತಂಡ

ಕೋವಿಡ್‌: ಮಹಾರಾಷ್ಟ್ರ, ಕೇರಳದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಸ್ಥಿರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 20:35 IST
Last Updated 2 ಜುಲೈ 2021, 20:35 IST
.
.   

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಪ್ರತಿದಿನ ಪತ್ತೆಯಾಗುವ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪೂರ್ಣ ಪ್ರಮಾಣದ ಇಳಿಕೆ ಸಾಧ್ಯವಾಗಿಲ್ಲ. ಎರಡೂ ರಾಜ್ಯಗಳಲ್ಲಿ ಕೆಲವು ದಿನಗಳಿಂದ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಸ್ಥಿರವಾಗಿದೆ. ಅಲ್ಲದೆ ಇನ್ನೂ ಐದು ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ಏಳೂ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ತಜ್ಞರ ತಂಡವನ್ನು ಕಳುಹಿಸಿದೆ.

ಮಹಾರಾಷ್ಟ್ರದಲ್ಲಿ ಜೂನ್ ಕೊನೆಯ ಎರಡು ವಾರ ಮತ್ತು ಜುಲೈನ ಮೊದಲ ಎರಡು ದಿನ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ 8,000ದಿಂದ 10,000ರದ ನಡುವೆ ಇದೆ. ‘ಈ 17 ದಿನಗಳಲ್ಲಿ ಪ್ರತಿದಿನ ಪತ್ತೆಯಾದ ಹೊಸ ಪ್ರಕರಣಗಳ ಸಂಖ್ಯೆ 8,000ಕ್ಕಿಂತ ಕಡಿಮೆಯಾಗಿಲ್ಲ. ಇದು ಕಳವಳಕಾರಿ ಅಂಶ’ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ಮಹಾರಾಷ್ಟ್ರದ ಹಲವೆಡೆ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಆದರೆ, ರತ್ನಗಿರಿ, ಸಿಂಧುದುರ್ಗ, ಪುಣೆ, ಸಾಂಗ್ಲಿ, ಸತಾರಾ, ಕೊಲ್ಹಾಪುರ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ADVERTISEMENT

ಕೇರಳದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾದ ನಂತರ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಲಾಗಿತ್ತು. ಆನಂತರ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಲೇ ಇಲ್ಲ. ಜೂನ್ 30 ಮತ್ತು ಜುಲೈ 1ರಂದು 13,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಜುಲೈ 2ರಂದು 12,868 ಪ್ರಕರಣಗಳು ಪತ್ತೆಯಾಗಿವೆ. ಪ್ರತಿದಿನ ನಡೆಸುತ್ತಿರುವಕೋವಿಡ್‌ ಪರೀಕ್ಷೆಗಳಲ್ಲಿ ಕೋವಿಡ್‌ ದೃಢಪಡುವ ಪ್ರಮಾಣ ಶೇ 10ಕ್ಕಿಂತಲೂ ಹೆಚ್ಚು ಇದೆ.

ಅರುಣಾಚಲ ಪ್ರದೇಶ, ತ್ರಿಪುರಾ, ಒಡಿಶಾ, ಛತ್ತೀಸಗಡ ಮತ್ತು ಮಣಿಪುರದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಹೀಗಾಗಿ ಈ ರಾಜ್ಯಗಳಿಗೆ ತಜ್ಞರ ತಂಡವನ್ನು ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.