ADVERTISEMENT

ಕೋವಿಡ್-19: ಕ್ವಾರಂಟೈನ್‌ ಸೆಂಟರ್‌ನಲ್ಲಿ ದಂಪತಿಗೆ ಸೋಂಕು?, ಬೆಚ್ಚಿಬಿದ್ದ ಜನತೆ

ಸಿದ್ದರಾಜು ಎಂ.
Published 6 ಏಪ್ರಿಲ್ 2020, 19:45 IST
Last Updated 6 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ.

ನಿಗಾ ಕೇಂದ್ರ (ಕ್ವಾರಂಟೈನ್‌ ಸೆಂಟರ್‌)ದಿಂದ ಮನೆಗೆ ಮರಳಿದ್ದ ದಂಪತಿಗಳಲ್ಲಿ ಕೋವಿಡ್‌–19 ಸೋಂಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಸೌದಿ ಅರೇಬಿಯಾದಿಂದ ಉಮ್ರಾ ಯಾತ್ರೆ ಮುಗಿಸಿಕೊಂಡು ಮಾರ್ಚ್‌ 16 ರಂದು ಶ್ರೀನಗರಕ್ಕೆ ಬಂದಿದ್ದ ಶೋಪಿಯಾನ್‌ ಜಿಲ್ಲೆಯ ಈ ದಂಪತಿಯನ್ನು 14 ದಿನಗಳ ಕಾಲ ಆಸ್ಪತ್ರೆಯ ಶಂಕಿತರ ನಿಗಾ ಕೇಂದ್ರದಲ್ಲಿ ಇಡಲಾಗಿತ್ತು. ಆಗ ಅವರಲ್ಲಿ ಸೋಂಕು ಕಾಣಿಸಿಕೊಂಡಿರಲಿಲ್ಲ.

14 ದಿನಗಳ ಕಡ್ಡಾಯ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ್ದ ಈ ದಂಪತಿಯಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟ ಬಳಿಕ ಏಪ್ರಿಲ್‌ 1ರಂದು ಮನೆಗೆ ಕಳುಹಿಸಲಾಗಿತ್ತು ಆದರೆ ಏಪ್ರಿಲ್‌ 3ರಂದು ದಂಪತಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ.
ಇದರಿಂದ ಗಾಬರಿಗೊಳಗಾದ ದಂಪತಿ ಅದೇ ದಿನ ಆಸ್ಪತ್ರೆಗೆ ದಾಖಲಾದರು. ಮರುದಿನ ಸೋಂಕು ಪರೀಕ್ಷೆ ವರದಿ ಬಂದಾಗ ಆಘಾತ ಕಾದಿತ್ತು. ಈ ದಂಪತಿಯ ಊಹೆ ನಿಜವಾಗಿತ್ತು. ರಕ್ತ ಮಾದರಿ ಹಾಗೂ ಗಂಟಲು ದ್ರವ ಪರೀಕ್ಷೆಗಳು ದಂಪತಿಯಲ್ಲಿ ಕೋವಿಡ್‌–19 ಸೋಂಕು ಇರುವುದನ್ನು ದೃಢಪಡಿಸಿದ್ದವು.

ADVERTISEMENT

ದಂಪತಿ ವಿದೇಶದಿಂದ ಮರಳಿ ಬಂದಾಗ ಇಲ್ಲದ ಸೋಂಕು ಈಗ ಎಲ್ಲಿಂದ ಬಂತು ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ. ಬಹುಶಃ. ಕ್ವಾರಂಟೈನ್‌ ಅವಧಿಯಲ್ಲಿ ಸೋಂಕು ತಗುಲಿರಬಹುದಾದ ಸಾಧ್ಯತೆಯನ್ನು ವೈದ್ಯರು ಕೂಡ ಅಲ್ಲಗಳೆಯುತ್ತಿಲ್ಲ.
‘18 ದಿನಗಳ ಬಳಿಕ ಸೋಂಕು ವೃದ್ದಿಯಾಗಲು ಸಾಧ್ಯವಿಲ್ಲ. ಸೂಕ್ತ ನಿರ್ವಹಣೆ ಇಲ್ಲದ ಕ್ವಾರಂಟೈನ್‌ ಕೇಂದ್ರದಲ್ಲೇ ಸೋಂಕು ತಗಲಿರಬಹುದು’ ಎಂದು ವೈದ್ಯರು ಶಂಕಿಸಿದ್ದಾರೆ.

ಮಾರ್ಚ್‌ 16 ರಂದು ಸೌದಿ ಅರೇಬಿಯಾದಿಂದ ವಿಮಾನದಲ್ಲಿ ಕಾಶ್ಮೀರದ ಮೊದಲ ಕೋವಿಡ್‌ ಸೋಂಕಿತ ಮಹಿಳೆಯ ಜತೆಯಲ್ಲಿ ಶೋಪಿಯಾನ್‌ ಜಿಲ್ಲೆಯ ಈ ದಂಪತಿಯ ಜತೆ 9 ಮಂದಿ ಶ್ರೀನಗರಕ್ಕೆ ಬಂದಿದ್ದರು. ಕ್ವಾರಂಟೈನ್‌ನಿಂದ ಬಿಡುಗಡೆಯ ನಂತರ ಎರಡು ದಿನಗಳವರೆಗೆ ಹೊರ ಹೋಗದೆ ಮನೆಯಲ್ಲಿ ನಿಗಾ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿ ಕಳುಹಿಸಿದ್ದರು. ಆದರೆ ವೈದ್ಯರ ಸಲಹೆ ನಿರ್ಲಕ್ಷಿಸಿ ಹೊರ ಹೋದ 9 ಮಂದಿಯ ಪೈಕಿ ದಂಪತಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಸದ್ಯ ಹೊರ ಹೋಗಿದ್ದ ಎಲ್ಲ ಸದಸ್ಯರನ್ನು ಮತ್ತೆ ಕರೆತಂದು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಕ್ವಾರಂಟೈನ್‌ನಿಂದ ಮರಳಿದ ಬಳಿಕ ಈ ಯಾತ್ರಿಕರು ತಮ್ಮ ಸಂಬಂಧಿಕರು, ಸ್ನೇಹಿತರು ಹಾಗೂ ಅಕ್ಕಪಕ್ಕದವರನ್ನು ಭೇಟಿ ಮಾಡಿ ಸಿಹಿ ಹಂಚಿದ್ದಾರೆ. ಅಲ್ಲದೇ ಪರಸ್ಪರ ಅಪ್ಪಿಕೊಂಡು ಹಸ್ತಲಾಘವ ಕೂಡ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.