ADVERTISEMENT

ಕೋವಿಡ್–19 ಬಿಕ್ಕಟ್ಟು: ಕೇರಳದಲ್ಲಿ ಆಮ್ಲಜನಕ, ಹಾಸಿಗೆ ಕೊರತೆ

ಅರ್ಜುನ್ ರಘುನಾಥ್
Published 12 ಮೇ 2021, 14:11 IST
Last Updated 12 ಮೇ 2021, 14:11 IST
ಸಾಂದರ್ಭಿಕ ಚಿತ್ರ – ಕೃಪೆ: ಐಸ್ಟಾಕ್
ಸಾಂದರ್ಭಿಕ ಚಿತ್ರ – ಕೃಪೆ: ಐಸ್ಟಾಕ್   

ತಿರುವನಂತಪುರ: ಕೇರಳದಲ್ಲಿ ಕೋವಿಡ್‌–19 ಬಿಕ್ಕಟ್ಟು ಉಲ್ಬಣಿಸಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ ಕೊರತೆ ಎದುರಾಗಿದೆ. ಲಸಿಕೆ ಅಭಿಯಾನವೂ ಮಂದ ಗತಿಯಲ್ಲಿ ಸಾಗುತ್ತಿದೆ. ಈವರೆಗೆ ರಾಜ್ಯದ ಒಟ್ಟು ಜನಸಂಖ್ಯೆಯ ಶೇ 18ರಷ್ಟು ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ.

ಆದರೆ, ಪರಿಸ್ಥಿತಿ ಇನ್ನೂ ಕೈಮೀರಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ.

ಸದ್ಯ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 4.2 ಲಕ್ಷ ಇದ್ದು, ಮುಂದಿನ ವಾರದ ವೇಳೆಗೆ 6 ಲಕ್ಷ ತಲುಪಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದರೆ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಸಿಲ್ಲ ಎಂದು ಟೀಕೆ ವ್ಯಕ್ತವಾಗಿದೆ. ಚುನಾವಣಾ ಪ್ರಚಾರ ಅಭಿಯಾನಗಳ ಸಂದರ್ಭ ಅಂತರ ಕಾಯ್ದುಕೊಳ್ಳುವಿಕೆ ನಿಯಮವನ್ನು ಎಲ್ಲ ರಾಜಕೀಯ ಪಕ್ಷಗಳು ಗಾಳಿಗೆ ತೂರಿದ್ದವು.

ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿವೆ. ಅವು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಆರೋಗ್ಯ ತಜ್ಞ ಡಾ. ವಿ.ರಾಮನ್ ಕುಟ್ಟಿ ಹೇಳಿದ್ದಾರೆ.

ಕೋವಿಡ್ ಇನ್ನೂ ಕಾಲ ಇರುತ್ತದೆ ಎಂಬುದು ಖಚಿತ. ಹೀಗಾಗಿ ದೀರ್ಘಕಾಲೀನ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಅನೇಕ ರಾಜ್ಯಗಳು ಆಮ್ಲಜನಕ ಕೊರತೆ ಎದುರಿಸುತ್ತಿದ್ದರೆ ಕೇರಳವು ಹೆಚ್ಚುವರಿ ಆಮ್ಲಜನಕ ಹೊಂದಿದೆ ಎಂದು ಹೇಳಲಾಗಿತ್ತು. ಆದರೆ ವಾಸ್ತವ ಬೇರೆಯೇ ಇದೆ. ಆಗ ರಾಜ್ಯದಲ್ಲಿ ಬೇಡಿಕೆ ಕಡಿಮೆ ಇತ್ತು. ಈಗ ಪರಿಸ್ಥಿತಿ ಬದಲಾಗುತ್ತಿದೆ.

ರಾಜ್ಯದಲ್ಲಿ ಪ್ರತಿ ದಿನ 219 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆಯಾಗುತ್ತಿದೆ. 1,000 ಮೆಟ್ರಿಕ್ ಟನ್ ಸಂಗ್ರಹವಿದೆ. ಮುಂದಿನ ವಾರದ ವೇಳೆಗೆ ಇದು 450 ಮೆಟ್ರಿಕ್ ಟನ್‌ಗೆ ಇಳಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಹೆಚ್ಚುವರಿ ಆಮ್ಲಜನಕ ಪೂರೈಸುವಂತೆ ರಾಜ್ಯ ಸರ್ಕಾರವು ಕೇಂದ್ರವನ್ನು ಒತ್ತಾಯಿಸುತ್ತಿದೆ. ಯಾವುದೇ ಬಿಕ್ಕಟ್ಟು ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ, ಪ್ರಮುಖ ಆಸ್ಪತ್ರೆಗಳು ಪ್ರತಿದಿನ ಆಮ್ಲಜನಕಕ್ಕಾಗಿ ಮನವಿ ಮಾಡುತ್ತಿವೆ.

ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇರುವುದೂ ಬಲುದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ. ಎಲ್ಲ ಖಾಸಗಿ ಆಸ್ಪತ್ರೆಗಳೂ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿಡುವಂತೆ ಸೂಚಿಸಿದೆ. ಆದರೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ದೊರೆಯುತ್ತಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ.

ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಕೇಂದ್ರದಿಂದ ಹೆಚ್ಚುವರಿ ಆಮ್ಲಜನಕಕ್ಕೆ ಮನವಿ ಮಾಡಲಾಗಿದೆ. ಜತೆಗೆ ಉಕ್ಕು ಉತ್ಪಾದನಾ ಘಟಕಗಳಿಂದಲೂ ಆಮ್ಲಜನಕ ದೊರೆಯಲಿದೆ. ಲಸಿಕೆ ನೀಡಿಕೆ ಅಭಿಯಾನ ನಿಧಾನಗೊಳ್ಳಲು ಕೇಂದ್ರದಿಂದ ಪೂರೈಕೆ ವಿಳಂಬವಾಗಿರುವುದೇ ಕಾರಣ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.