ADVERTISEMENT

Covid-19 India Update: ಕೇರಳ, ದೆಹಲಿ, ಪಶ್ಚಿಮ ಬಂಗಾಳದಲ್ಲಿ ಪ್ರಕರಣಗಳು ಏರಿಕೆ

ಏಜೆನ್ಸೀಸ್
Published 3 ನವೆಂಬರ್ 2020, 15:34 IST
Last Updated 3 ನವೆಂಬರ್ 2020, 15:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಕ್ಟೋಬರ್‌ 3ರಿಂದ ನವೆಂಬರ್‌ 3ರ ವರೆಗೂ ಕೇರಳ, ದೆಹಲಿ, ಪಶ್ಚಿಮ ಬಂಗಾಳ ಹಾಗೂ ಮಣಿಪುರದಲ್ಲಿ ಕೋವಿಡ್‌–19 ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.

ಇದೇ ಅವಧಿಯಲ್ಲಿ ಮಹಾರಾಷ್ಟ್ರ. ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದಾಗಿ ಸಚಿವಾಲಯ ತಿಳಿಸಿದೆ. ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸರಾಸರಿ ಪ್ರಮಾಣದಲ್ಲಿ ನಿರಂತರ ಇಳಿಕೆ ಕಂಡು ಬಂದಿದೆ ಹಾಗೂ ಕಳೆದ ಏಳು ವಾರಗಳಿಂದ ಸೋಂಕಿನಿಂದ ಸಾವಿಗೀಡಾಗುತ್ತಿರುವ ಪ್ರಮಾಣವೂ ಕಡಿಮೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ.

ದೇಶದಲ್ಲಿ ಸೆಪ್ಟೆಂಬರ್‌ 16ರಿಂದ ಸೆಪ್ಟೆಂಬರ್‌ 22ರ ವರೆಗೂ ನಿತ್ಯದ ಸರಾಸರಿ ಕೋವಿಡ್‌–19 ಪ್ರಕರಣಗಳು 90,346 ದಾಖಲಾಗಿತ್ತು. ಅಕ್ಟೋಬರ್‌ 28ರಿಂದ ನವೆಂಬರ್‌ 3ರ ವರೆಗೂ ಈ ಪ್ರಮಾಣ 45,884 ಪ್ರಕರಣಗಳಿಗೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಸೋಂಕಿನಿಂದ ಸಾವಿಗೀಡಾದ ಪ್ರಮಾಣ ಸರಾಸರಿ 1,165 ರಿಂದ 513ಕ್ಕೆ ಇಳಿಕೆಯಾಗಿರುವುದಾಗಿ ತಿಳಿಸಿದ್ದಾರೆ.

ADVERTISEMENT

ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು, 6,725 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 3,610 ಮಂದಿ ಗುಣಮುಖರಾಗಿದ್ದಾರೆ ಹಾಗೂ 48 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ 36,375 ಸಕ್ರಿಯ ಪ್ರಕರಣಗಳಿವೆ. ಪಶ್ಚಿಮ ಬಂಗಾಳದಲ್ಲಿ 3,981, ತಮಿಳುನಾಡಿನಲ್ಲಿ 2,435 ಪ್ರಕರಣಗಳು ಹಾಗೂ ಆಂಧ್ರ ಪ್ರದೇಶದಲ್ಲಿ 2,849 ಹೊಸ ಪ್ರಕರಣಗಳು ದಾಖಲಾಗಿವೆ.

ಮಂಗಳವಾರ ಬೆಳಗ್ಗಿನ ವರೆಗೂ ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ 38,310 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 490 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಈವರೆಗೆ ಸೋಂಕು ತಗುಲಿದವರ ಸಂಖ್ಯೆ 82,67,623ಕ್ಕೆ ಏರಿಕೆಯಾಗಿದೆ. ಒಟ್ಟು 1,23,097 ಸೋಂಕಿತರು ಸಾವಿಗೀಡಾಗಿದ್ದಾರೆ. 76,03,121 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ 5,41,405 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ ಅತಿಹೆಚ್ಚು, 1,19,352 ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ 44,824 ಹಾಗೂ ದೆಹಲಿಯಲ್ಲಿ 33,308 ಸಕ್ರಿಯ ಪ್ರಕರಣಗಳಿವೆ ಎಂದೂ ಸಚಿವಾಲಯ ತಿಳಿಸಿದೆ.

ದೇಶದಾದ್ಯಂತ ನವೆಂಬರ್ 2ರಂದು 10,46,247 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ 11.17 ಕೋಟಿಗೂ ಹೆಚ್ಚು ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ಒಟ್ಟು ಕೊರೊನಾ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 6.83ರಷ್ಟಿದ್ದು, ಚೇತರಿಕೆ ದರ ಶೇ 91.68ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.