ADVERTISEMENT

ಕೋವಿಡ್-19: ಚಂಡೀಗಡದಲ್ಲಿ ಮೊದಲ ಪ್ರಕರಣ ಪತ್ತೆ, ದೇಶದಲ್ಲಿ ಸೋಂಕಿತರ ಸಂಖ್ಯೆ 170

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 4:05 IST
Last Updated 19 ಮಾರ್ಚ್ 2020, 4:05 IST
ವೈದ್ಯಕೀಯ ತಪಾಸಣೆ (ಸಾಂದರ್ಭಿಕ ಚಿತ್ರ)
ವೈದ್ಯಕೀಯ ತಪಾಸಣೆ (ಸಾಂದರ್ಭಿಕ ಚಿತ್ರ)   

ನವದೆಹಲಿ: ಚಂಡೀಗಡದಲ್ಲಿ 23 ಹರೆಯದ ಮಹಿಳೆಯೊಬ್ಬರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇವರು ಬ್ರಿಟನ್‌ನಿಂದ ಮರಳಿದ್ದರು. ಚಂಡೀಗಡದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದ್ದು ದೇಶದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 170ಕ್ಕೆ ಏರಿದೆ.

ತೆಲಂಗಾಣದಲ್ಲಿ 7 ಮಂದಿಗೆ ಸೋಂಕು
ತೆಲಂಗಾಣದಲ್ಲಿ ಕೋವಿಡ್-19 ಸೋಂಕು ಇರುವ 7 ಪ್ರಕರಣಗಳು ವರದಿಯಾಗಿದೆ. ಕೋವಿಡ್-19 ಸೋಂಕಿತ ವ್ಯಕ್ತಿಯೊಂದಿಗೆ ಪ್ರಯಾಣಿಸಿದ ಇಂಡೋನೇಷ್ಯಾದ ಪ್ರಜೆಗಳಿಗೆ ಈ ಸೋಂಕು ಇರುವುದು ಪತ್ತೆಯಾಗಿದೆ. ಇಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ.

ಮಾರ್ಚ್ 16ರಂದು ಇವರನ್ನು ಪ್ರತ್ಯೇಕವಾಗಿಟ್ಟು ನಿಗಾ ಇರಿಸಲಾಗಿತ್ತು. ಮಾರ್ಚ್ 18ಕ್ಕೆ ಇವರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ತೆಲಂಗಾಣ ಸರ್ಕಾರ ಹೇಳಿದೆ. 7 ಮಂದಿಯ ಪೈಕಿ ಆರು ಜನರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದರು ಎಂದು ಸರ್ಕಾರ ಹೇಳಿದೆ.

ಇಂಡೋನೇಷ್ಯಾದ ಪ್ರಜೆಯಾಗಿರುವ 5ನೇ ರೋಗಿಯನ್ನು ಕರೀಂ ನಗರದಿಂದ ಪತ್ತೆ ಹಚ್ಚಲಾಗಿತ್ತು. ಇವರು ಮಾರ್ಚ್ 13ರಂದು ದೆಹಲಿಯಿಂದ ರೈಲು ಮೂಲಕ ಕರೀಂನಗರಕ್ಕೆ ಬಂದಿದ್ದರು. ಆಂಧ್ರ ಪ್ರದೇಶ ಸಂಪರ್ಕ್ ಕ್ರಾಂತಿ (ರೈಲು ಸಂಖ್ಯೆ 12708)ರ ಎಸ್9 ಬೋಗಿಯಲ್ಲಿ ಪ್ರಯಾಣಿಸಿದ್ದು ರಾಮಗುಂಡಂನಲ್ಲಿ ಇಳಿದಿದ್ದರು. ಈ ಪ್ರಯಾಣದ ವೇಳೆ ಕರೀಂನಗರದಿಂದ ಮೂವರು ಭಾರತೀಯರು ಇವರ ಜತೆಗಿದ್ದರು. ಇಂಡೋನೇಷ್ಯಾದ ಪ್ರಜೆಗಳು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕರೀಂನಗರಕ್ಕೆ ಬಂದಿದ್ದರು. ಅವರು ಅಲ್ಲಿನ ಮಸೀದಿಯಲ್ಲಿ ತಂಗಿದ್ದರು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.