ADVERTISEMENT

4 ರಾಜ್ಯಗಳಲ್ಲಿ ಕೋವಿಡ್ ಉಲ್ಬಣ: ಆತಂಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 21:50 IST
Last Updated 20 ಫೆಬ್ರುವರಿ 2021, 21:50 IST
   

ನವದೆಹಲಿ: ಮಹಾರಾಷ್ಟ್ರ, ಪಂಜಾಬ್, ಛತ್ತೀಸಗಡ ಹಾಗೂ ಮಧ್ಯಪ್ರದೇಶದಲ್ಲಿ ಕೋವಿಡ್–19 ಪ್ರಕರಣಗಳು ಕೆಲವು ದಿನಗಳಿಂದ ಏರುಗತಿಯಲ್ಲಿವೆ. ಈ ಮಧ್ಯೆ ಕೇರಳದಲ್ಲಿ ನಿತ್ಯವೂ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಕಳವಳ ವ್ಯಕ್ತಪಡಿಸಿದೆ.

ಮಹಾರಾಷ್ಟ್ರದಲ್ಲಿ ಏರುಗತಿಯಲ್ಲಿದ್ದ ಪ್ರಕರಣಗಳು ನವೆಂಬರ್–ಡಿಸೆಂಬರ್ ವೇಳೆಗೆ ಕಡಿಮೆಯಾಗಲು ಆರಂಭಿಸಿ, ಫೆಬ್ರುವರಿ ಮಧ್ಯಭಾಗದವರೆಗೂ ಇಳಿಕೆಯಾಗುತ್ತಲೇ ಇದ್ದವು. ಆದರೆ ಫೆ.16ರಿಂದ ಈ ಸಂಖ್ಯೆ ಮತ್ತೆ ಏರುಮುಖವಾಗಿದೆ. ಜನವರಿ 1ರ ಬಳಿಕ ಶನಿವಾರ 6 ಸಾವಿರ ಪ್ರಕರಣ ಪತ್ತೆಯಾಗಿದೆ.

ಪಂಜಾಬ್‌ನಲ್ಲೂ ಫೆಬ್ರುವರಿ ಆರಂಭದಿಂದ ಪ್ರತಿನಿತ್ಯ ಸುಮಾರು 400 ಪ್ರಕರಣಗಳು ಹೊರಬರುತ್ತಿವೆ. ಮಧ್ಯಪ್ರದೇಶ ಹಾಗೂ ಛತ್ತೀಸಗಡದಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಏರಿಕೆ ಕಂಡುಬಂದಿದೆ.

ADVERTISEMENT

ಕೇರಳದಲ್ಲಿ ಸದ್ಯ ಪ್ರಕರಣಗಳು ಇಳಿಮುಖವಾಗಿವೆ. ಆದರೆ ಮಹಾರಾಷ್ಟ್ರ ಹೊರತುಪಡಿಸಿದರೆ ಅತಿಹೆಚ್ಚು ಪ್ರಕರಣಗಳು ಈ ರಾಜ್ಯದಲ್ಲಿ ವರದಿಯಾಗುತ್ತಿವೆ. 24 ಗಂಟೆಯಲ್ಲಿ ಇಲ್ಲಿ 4,500 ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ.

ಫೆಬ್ರವರಿ 20ರವರೆಗಿನ ಮಾಹಿತಿ ಪ್ರಕಾರ, ಶೇ 35ಕ್ಕಿಂತ ಹೆಚ್ಚು ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆಯ ಮೊದಲ ಡೋಸ್‌ ಪಡೆದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.