ADVERTISEMENT

ಕೇಂದ್ರದ ಲಸಿಕೆ ನೀತಿಗೆ ಆಕ್ಷೇಪ: ರಾಹುಲ್‌, ಮಮತಾ ಟೀಕೆ

ಸರ್ಕಾರದ ಗಮನ ಸೆಳೆದ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ

ಪಿಟಿಐ
Published 20 ಏಪ್ರಿಲ್ 2021, 16:58 IST
Last Updated 20 ಏಪ್ರಿಲ್ 2021, 16:58 IST
ರಾಹುಲ್‌ ಗಾಂಧಿ, ಮಮತಾ ಬ್ಯಾನರ್ಜಿ
ರಾಹುಲ್‌ ಗಾಂಧಿ, ಮಮತಾ ಬ್ಯಾನರ್ಜಿ    

ನವದೆಹಲಿ/ಕೋಲ್ಕತ್ತ: ಕೇಂದ್ರ ಸರ್ಕಾರದ ಲಸಿಕೆ ನೀತಿಯು ತಾರಮತ್ಯದಿಂದ ಕೂಡಿದೆ ಎಂಬ ಕೂಗು ಎದ್ದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಬಗ್ಗೆ ದೂರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಮತಾ, ಕೇಂದ್ರದ ಲಸಿಕೆ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಏಪ್ರಿಲ್ 19ರಂದು ತೀರಾ ತಡವಾಗಿ ಸಾರ್ವತ್ರಿಕ ಲಸಿಕಾ ನೀತಿ ಪ್ರಕಟಿಸಲಾಗಿದ್ದು, ಅದರಲ್ಲಿ ಯಾವುದೇ ಗಟ್ಟಿತನ ಇಲ್ಲ ಎಂದು ದೂರಿದ್ದಾರೆ.

ಉತ್ಪಾದಕರಿಂದ ಲಸಿಕೆ ಖರೀದಿಸಿ ರಾಜ್ಯ ಸರ್ಕಾರದ ಕಡೆಯಿಂದ ಜನರಿಗೆ ಉಚಿತವಾಗಿ ನೀಡಲು ಅವಕಾಶ ನೀಡುವಂತೆ ಫೆಬ್ರುವರಿ 24ರಂದೇ ಪ್ರಧಾನಿ ಅವರಿಗೆ ಮನವಿ ಮಾಡಿದ್ದೆ ಎಂದು ಮಮತಾ ಪತ್ರದಲ್ಲಿ ನೆನಪಿಸಿದ್ದಾರೆ.

ADVERTISEMENT

‘ನನ್ನ ಪತ್ರಕ್ಕೆ ನಿಮ್ಮ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿದೆ. ಆದರೆ ಕೇಂದ್ರವು ಬರೀ ವಾಕ್ಚಾತುರ್ಯ ಪ್ರದರ್ಶಿಸುತ್ತಿದೆ. ಜನರಿಗೆ ಲಸಿಕೆಗಳನ್ನು ಲಭ್ಯವಾಗುವಂತೆ ಮಾಡುವ ಜವಾಬ್ದಾರಿಯಿಂದ ದೂರ ಸರಿಯುತ್ತಿದೆ’ ಎಂದು ಬ್ಯಾನರ್ಜಿ ಉಲ್ಲೇಖಿಸಿದ್ದಾರೆ.

ಸೋಮವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ನೀತಿಯಲ್ಲಿ ಯಾವುದೇ ಖಾತರಿ ಇರುವ ಘೋಷಣೆಗಳನ್ನು ಪ್ರಕಟಿಸಿಲ್ಲ. ಲಸಿಕೆಗಳನ್ನು ರಾಜ್ಯಗಳು ಖರೀದಿಸಬೇಕಾದ ಬೆಲೆ ಮುಂತಾದ ಪ್ರಮುಖ ಸಮಸ್ಯೆಗಳನ್ನು ಕೇಂದ್ರ ಬಗೆಹರಿಸಿಲ್ಲ ಎಂದು ಅವರು ಗಮನ ಸೆಳೆದಿದ್ದಾರೆ.

‘ನೀತಿಯಲ್ಲಿ ಲಸಿಕೆ ಪೂರೈಕೆ ಬಗ್ಗೆ ಕೇಂದ್ರ ಸರ್ಕಾರ ಖಚಿತ ನಿಲುವು ಪ್ರಕಟಿಸದ ಕಾರಣ, ಮಾರುಕಟ್ಟೆಯಲ್ಲಿ ಲಸಿಕೆ ಮಾರಾಟ ನಿಯಂತ್ರಣ ತಪ್ಪುತ್ತದೆ. ಇದು ಸಾಮಾನ್ಯ ಜನರಿಗೆ ಭಾರಿ ಆರ್ಥಿಕ ಹೊರೆಯಾಗುತ್ತದೆ’ ಎಂದಿದ್ದಾರೆ.

‘ದುರ್ಬಲರಿಗೆ ಲಭ್ಯವಾಗದು’: ಕೇಂದ್ರ ಸರ್ಕಾರದ ಲಸಿಕೆ ನೀತಿಯು ತಾರತಮ್ಯದಿಂದ ಕೂಡಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.

ದುರ್ಬಲ ಸಮುದಾಯದವರಿಗೆ ಲಸಿಕೆ ದೊರೆಯುತ್ತದೆ ಎಂಬ ಬಗ್ಗೆ ಯಾವುದೇ ಖಾತರಿ ಇಲ್ಲ ಎಂದು ಆರೋಪಿಸಿರುವ ಅವರು, 18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ಉಚಿತವಾಗಿ ಸಿಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಮೇ 1ರಿಂದ ಎಲ್ಲ ವಯಸ್ಕರು ಕೋವಿಡ್ ಲಸಿಕೆ ಪಡೆಯಲು ಅರ್ಹರಾಗುತ್ತಾರೆ ಎಂದು ಸರ್ಕಾರ ಸೋಮವಾರ ಪ್ರಕಟಿಸಿತ್ತು. ಖಾಸಗಿ ಆಸ್ಪತ್ರೆಗಳು ಮತ್ತು ರಾಜ್ಯಗಳು ಉತ್ಪಾದಕರಿಂದ ನೇರವಾಗಿ ಡೋಸ್‌ಗಳನ್ನು ಖರೀದಿಸಲು ಸರ್ಕಾರ ಅನುವು ಮಾಡಿಕೊಟ್ಟಿದೆ.

ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್ ದೆಹಲಿ ಮೊದಲಾದ ರಾಜ್ಯಗಳು ಲಸಿಕೆ ಪಡೆಯಲು ಇರುವ ವಯಸ್ಸಿನ ಮಿತಿ ತೆಗೆದುಹಾಕುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದವು.

ಮುಂದಿನ ತಿಂಗಳು ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಶುರುವಾಗಲಿದೆ. ಲಸಿಕೆ ತಯಾರಕರು ರಾಜ್ಯ ಸರ್ಕಾರಗಳಿಗೆ ಮತ್ತುಮುಕ್ತ ಮಾರುಕಟ್ಟೆಗೆ ಶೇ 50ರಷ್ಟು ಡೋಸ್‌ಗಳನ್ನು ಪೂರೈಸಲು ಮುಕ್ತರಾಗಿದ್ದಾರೆ. ಆದರೆ ಅವರು ಮೇ 1ರ ಮೊದಲು ಬೆಲೆಯನ್ನು ಮುಂಗಡವಾಗಿ ಘೋಷಿಸಬೇಕಿದೆ.

***

ಮೋದಿ ಅವರೇ, ಚುನಾವಣೆ ಗೆಲ್ಲಲು ನೀವು ಸ್ನಾಯುಬಲ, ಮಾತಿನ ಬಲ ಎಲ್ಲವನ್ನೂ ಬಳಸುತ್ತೀರಿ. ಅದೇ ಹುರುಪಿನಲ್ಲಿ ಕೋವಿಡ್‌ ವಿರುದ್ಧ ನಮ್ಮ ಜನರಿಗಾಗಿ ಏಕೆ ಹೋರಾಡುತ್ತಿಲ್ಲ?
- ಕಪಿಲ್ ಸಿಬಲ್‌, ಕಾಂಗ್ರೆಸ್‌ ಮುಖಂಡ

***

ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ಚುನಾವಣೆಯಲ್ಲಿ ಈ ಸರ್ಕಾರಕ್ಕೆ ನಂಬಿಕೆ ಇದೆ. ಆದರೆ ಲಸಿಕೆಗಳಿಗೆ ಮಾತ್ರ ಬೇರೆ ಬೇರೆ ದರ ಇದೆ.
- ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.