ADVERTISEMENT

Covid-19 World Update | ಹಲವು ದೇಶಗಳಲ್ಲಿ ಮತ್ತೆ ಭಾಗಶಃ ನಿರ್ಬಂಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2020, 7:18 IST
Last Updated 14 ಅಕ್ಟೋಬರ್ 2020, 7:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾ ಸೋಂಕು ಹರಡುವ ಪ್ರಮಾಣ ಮತ್ತೆ ತೀವ್ರಗೊಂಡಿದೆ. ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ್ದ ಸರ್ಕಾರಗಳು, ಮತ್ತೊಮ್ಮೆ ಜನಸಂಚಾರ ಮತ್ತು ಗುಂಪುಸೇರುವುದರ ಮೇಲೆ ಬಿಗಿ ನಿರ್ಬಂಧಗಳನ್ನು ಹೇರುತ್ತಿವೆ. ಆಸ್ಪತ್ರೆಗಳ ಐಸಿಯುಗಳು ತುಂಬಿದ್ದು, ಹೊಸ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ.

ಬುಧವಾರ ಮಧ್ಯಾಹ್ನ 12 ಗಂಟೆ ವೇಳೆಗೆ ವಿಶ್ವದಲ್ಲಿ ಒಟ್ಟು 3,83,70,434 ಮಂದಿಗೆ ಸೋಂಕು ತಗುಲಿತ್ತು. ಒಟ್ಟು 10,90,921 ಮಂದಿ ಸೋಂಕಿನಿಂದ ಮೃತಪಟ್ಟಿದ್ದರೆ, 2,88,53,981 ಮಂದಿ ಚೇತರಿಸಿಕೊಂಡಿದ್ದಾರೆ.

ಅಮೆರಿದಲ್ಲಿ 80,90,252 ಸೋಂಕಿತರಿದ್ದು, ವಿಶ್ವದಲ್ಲಿ ಅತಿಹೆಚ್ಚು ಸೋಂಕಿತರು ಇರುವ ದೇಶ ಎನಿಸಿಕೊಂಡಿದೆ. ಈವರೆಗೆ ಅಮೆರಿಕದಲ್ಲಿ ಸೋಂಕಿನಿಂದ 2,20,873 ಮಂದಿ ಮೃತಪಟ್ಟಿದ್ದಾರೆ.

ADVERTISEMENT

72,39,389 ಮಂದಿ ಸೋಂಕಿತರಿರುವ ಭಾರತ 2ನೇ ಸ್ಥಾನದಲ್ಲಿದೆ, 51,14,823 ಸೋಂಕಿತರಿರುವ ಬ್ರೆಜಿಲ್ 3ನೇ ಸ್ಥಾನದಲ್ಲಿದೆ. ಬ್ರೆಜಿಲ್‌ನಲ್ಲಿ ಈವರೆಗೆ ಸೋಂಕಿನಿಂದ 1,51,063 ಮಂದಿ ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸೋಂಕು ಹರಡುವ ಪ್ರಮಾಣ, ಆಸ್ಪತ್ರೆಗೆ ದಾಖಲಾಗುವವರು ಮತ್ತು ಸೋಂಕಿನಿಂವ ಸಾವಿಗೀಡಾಗುವವರ ಸಂಖ್ಯೆಯೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚುತ್ತಿದೆ.

ಒಂದು ದಿನದ ಅವಧಿಯಲ್ಲಿ 13,868 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, 244 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 22,966 ಮುಟ್ಟಿದೆ. ಮೇ 29ರಂದು ಒಂದೇ ದಿನ 232 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ರಷ್ಯಾದಲ್ಲಿ ವರದಿಯಾದ ಈವರೆಗಿನ ದಾಖಲೆಯಾಗಿತ್ತು. ರಷ್ಯಾದ ಒಟ್ಟು ಸೋಂಕಿತರ ಸಂಖ್ಯೆ 1,326,178ಕ್ಕೆ ಮುಟ್ಟಿದೆ. ಅಮೆರಿಕ, ಭಾರತ ಮತ್ತು ಬ್ರೆಜಿಲ್ ನಂತರದ ಸ್ಥಾನದಲ್ಲಿ ರಷ್ಯಾ ಇದೆ.

ಮಧ್ಯಪ್ರಾಚ್ಯ ದೇಶಗಳ ಪೈಕಿ ಕೊರೊನಾ ಸಂಖ್ಯೆ ಹೆಚ್ಚಾಗಿ ಕಾಣಿಸಿಕೊಂಡಿರುವ ಇರಾನ್‌ನಲ್ಲಿ ಸಾವಿನ ಸಂಖ್ಯೆ 29,070 ಮುಟ್ಟಿದೆ. ಒಟ್ಟು 50,8389 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಫ್ರಾನ್ಸ್‌ನಲ್ಲಿಯೂ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗತೊಡಗಿದೆ. ಅಲ್ಲಿನ ಸರ್ಕಾರ ಸ್ಥಳೀಯ ಮಟ್ಟದಲ್ಲಿ ಲಾಕ್‌ಡೌನ್ ಘೋಷಿಸಲು ಮುಂದಾಗಿದೆ. ಪ್ಯಾರೀಸ್, ಮರ್ಸೆಲ್ ಮತ್ತು ಇತರ ಏಳು ನಗರಗಳಲ್ಲಿ ಬಾರ್‌, ಜಿಮ್, ಈಜುಕೊಳಗಳನ್ನು ನಿರ್ಬಂಧಿಸಲಾಗಿದೆ.

ಫ್ರಾನ್ಸ್‌ನಲ್ಲಿ ಒಂದೇ ದಿನ 117 ಮಂದಿ ಮೃತಪಟ್ಟಿದ್ದಾರೆ. ಐಸಿಯುಗಳು ತುಂಬಿದ್ದು, ಹೊಸ ಸೋಂಕಿತರಿಗೆ ಚಿಕಿತ್ಸೆ ಕೊಡುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ನೆದರ್‌ಲೆಂಡ್ಸ್‌ ಸರ್ಕಾರವು ಭಾಗಶಃ ಲಾಕ್‌ಡೌನ್‌ ಘೋಷಣೆಗೆ ಮುಂದಾಗಿದೆ. ಟೆಲಿವಿಷನ್ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಡಚ್ ಪ್ರಧಾನಿ ಮಾರ್ಕ್ ರಟ್ಟೆ, ಬಾರ್ ಮತ್ತು ರೆಸ್ಟೊರೆಂಟ್‌ಗಳು ಬಾಗಿಲು ಹಾಕಬೇಕು ಎಂದು ಹೇಳಿದರು.

ಇಟಲಿ ಮತ್ತು ಪೊಲೆಂಡ್‌ಗಳಲ್ಲೂ ಸೋಂಕು ಹರಡುವ ಪ್ರಮಾಣ ಹೆಚ್ಚಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಸರ್ಕಾರಗಳು ಜನಸಂಚಾರ, ಜನರು ಗುಂಪುಸೇರುವುದು ಮತ್ತು ಸಮೂಹ ಸಾರಿಗೆಗೆ ನಿರ್ಬಂಧ ವಿಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.