ADVERTISEMENT

ಬ್ರಿಟನ್‌ನಿಂದ ಬಂದವರಿಗೆ ಕಡ್ಡಾಯ ಪರೀಕ್ಷೆ: ದೆಹಲಿ ಸರ್ಕಾರದ ಕಟ್ಟುನಿಟ್ಟಿನ ಕ್ರಮ

ಹೊಸ ರೂಪದ ಕೊರೊನಾ ವೈರಸ್‌ ಪತ್ತೆ

ಏಜೆನ್ಸೀಸ್
Published 23 ಡಿಸೆಂಬರ್ 2020, 11:18 IST
Last Updated 23 ಡಿಸೆಂಬರ್ 2020, 11:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಬ್ರಿಟನ್‌ನಿಂದ ರಾಷ್ಟ್ರ ರಾಜಧಾನಿಗೆ ಬಂದಿರುವವರನ್ನು ಪತ್ತೆ ಮಾಡಿ, ಕಡ್ಡಾಯವಾಗಿ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.

ಈ ವಿಚಾರವಾಗಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಬ್ರಿಟನ್‌ನಿಂದ ದೆಹಲಿಗೆ ಬಂದಿರುವವರನ್ನು ಪತ್ತೆ ಮಾಡಿ, ಕಡ್ಡಾಯವಾಗಿ ಕೊರೊನಾ ಸೋಂಕಿನ ಪರೀಕ್ಷೆ ಒಳಪಡಿಸಲಾಗುತ್ತಿದೆ. ದೆಹಲಿಯಲ್ಲಿ ಕೊರೊನಾ ಸೋಂಕು ಹರಡುವಿಕೆಯು ನಿಯಂತ್ರಣದಲ್ಲಿದೆ' ಎಂದು ಹೇಳಿದ್ದಾರೆ.

'ಬ್ರಿಟನ್‌ ಮತ್ತು ಭಾರತದ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿರುವ ಕೇಂದ್ರದ ಕ್ರಮ ಮೆಚ್ಚುವಂತದ್ದು. ಇದರಿಂದ ದೇಶದಲ್ಲಿ ಹೊಸ ರೂಪದ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರಬಹುದು' ಎಂದು ಜೈನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಹೊಸ ರೂಪದ ಕೊರೊನಾ ವೈರಸ್‌ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದಿರುವ ಅವರು, 'ಮನೆ-ಮನೆಗೆ ತೆರಳಿ, ಬ್ರಿಟನ್‌ನಿಂದ ಬಂದಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಅವರನ್ನು ಪರೀಕ್ಷೆಗೂ ಒಳಪಡಿಸಲಾಗುತ್ತಿದೆ. ಇದಕ್ಕಾಗಿಯೇ ತಂಡವೊಂದನ್ನು ರಚಿಸಲಾಗಿದೆ' ಎಂದು ಜೈನ್‌ ಹೇಳಿದ್ದಾರೆ.

ದೆಹಲಿಯ ಜನರು ಆತಂಕಕ್ಕೆ ಒಳಗಾಗದೇ, ಸೋಂಕು ಹರಡುವಿಕೆ ತಡೆಯಲು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್‌ ಪತ್ತೆಯಾಗಿದೆ. ಅದು ಅತ್ಯಂತ ವೇಗವಾಗಿ ಹರಡುತ್ತಿದ್ದು, ಪರಿಸ್ಥಿತಿ ಕೈಮೀರಿದೆ ಎಂದು ಬ್ರಿಟನ್‌ ಸರ್ಕಾರ ಹೇಳಿದೆ.

ಇದರ ಬೆನ್ನಲ್ಲೇ ಬ್ರಿಟನ್‌ನಿಂದ ಬರುವ ಎಲ್ಲಾ ವಿಮಾನಗಳನ್ನು ಹಲವು ರಾಷ್ಟ್ರಗಳು ರದ್ದುಪಡಿಸಿವೆ. ಹೊಸ ಸ್ವರೂಪದ ವೈರಸ್‌ ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.