ADVERTISEMENT

ಕೋವಿಡ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಸೋಂಕಿತೆ, ಕೆಲ ಗಂಟೆಗಳ ಬಳಿಕ ವಾಪಸ್!

ಐಎಎನ್ಎಸ್
Published 14 ಡಿಸೆಂಬರ್ 2021, 6:55 IST
Last Updated 14 ಡಿಸೆಂಬರ್ 2021, 6:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಉತ್ತರ ಪ್ರದೇಶದ ನೋಯ್ಡಾ ಜಿಲ್ಲೆಯ ಕೋವಿಡ್‌ಗಾಗಿ ಮೀಸಲಾದ ಆಸ್ಪತ್ರೆಯಿಂದ ಕೊರೊನಾ ವೈರಸ್ ಸೋಂಕಿತ ಅನಿವಾಸಿ ಭಾರತೀಯ (ಎನ್ಆರ್‌ಐ) ಮಹಿಳೆಯೊಬ್ಬರು ಪರಾರಿಯಾಗಿದ್ದರು. ಆದರೆ, ಐದು ಗಂಟೆಗಳ ಹುಡುಕಾಟದ ನಂತರ ನೋಯ್ಡಾ ಪೊಲೀಸರು ಆಕೆಯನ್ನು ಮತ್ತೆ ಆಸ್ಪತ್ರೆಗೆ ಕರೆತಂದಿದ್ದಾರೆ.

ನೋಯ್ಡಾದ ಸೆಕ್ಟರ್-137ರಲ್ಲಿ ವಾಸಿಸುತ್ತಿರುವ ಎನ್‌ಆರ್‌ಐ ಮಹಿಳೆಯೊಬ್ಬರು ಸಿಂಗಾಪುರದಿಂದ ನಾಲ್ಕು ವರ್ಷದ ಮಗುವಿನೊಂದಿಗೆ ಇಲ್ಲಿಗೆ ಬಂದಿದ್ದರು. ರೋಗ ಲಕ್ಷಣಗಳು ಕಾಣಿಸಿಕೊಂಡ ನಂತರ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಆಗಿದೆ. ಬಳಿಕ ಕ್ಷಿಪ್ರ ಕಾರ್ಯಪಡೆ ತಂಡವು ಮಹಿಳೆಯನ್ನು ಭಾನುವಾರ ಸೆಕ್ಟರ್-39 ನಲ್ಲಿರುವ ಆಸ್ಪತ್ರೆಗೆ ಕರೆತಂದಿದೆ.

'ಮಹಿಳೆ ಮತ್ತು ಆಕೆಯ ನಾಲ್ಕು ವರ್ಷದ ಮಗುವು ಕೋವಿಡ್ ಪರೀಕ್ಷೆಗಾಗಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಭಾನುವಾರ ರಾತ್ರಿ ಆಕೆ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಹಲವು ಗಂಟೆಗಳ ನಂತರ ವಾಪಸ್ ಆದ ಮಹಿಳೆ, ಮಗುವಿಗೆ ಹಾಲನ್ನು ತರುವುದಕ್ಕೆ ಹೋಗಿದ್ದಾಗಿ ತಿಳಿಸಿದ್ದಾರೆ' ಎಂದು ನೋಯ್ಡಾ ಸೆಕ್ಟರ್-39ರ ಪೊಲೀಸ್ ಠಾಣೆ ಉಸ್ತುವಾರಿ ರಾಜೀವ್ ಬಲಿಯನ್ ತಿಳಿಸಿದ್ದಾರೆ.

ADVERTISEMENT

ವರದಿಗಳ ಪ್ರಕಾರ, ಆಸ್ಪತ್ರೆ ಸಿಬ್ಬಂದಿ ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಆಕೆಯ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಯಾವುದೇ ಸುಳಿವು ಸಿಗದಿದ್ದರಿಂದಾಗಿ ಆಸ್ಪತ್ರೆ ಆಡಳಿತವು ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಹುಡುಕಾಟ ನಡೆಸಿದ್ದರು. ಹಲವಾರು ಗಂಟೆಗಳ ಬಳಿಕ ಮುಂಜಾನೆ 2 ಗಂಟೆ ಸುಮಾರಿಗೆ ಆಸ್ಪತ್ರೆಗೆ ಹಿಂದಿರುಗಿ ಮತ್ತೆ ದಾಖಲಾಗಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ವೈದ್ಯಕೀಯ ಮುಖ್ಯ ಅಧೀಕ್ಷಕಿ ಸುಷ್ಮಾ ಚಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.