ADVERTISEMENT

ಕೋವಿಡ್‌ನಿಂದ ಬಳಲುತ್ತಿದ್ದ ಯುವತಿಗೆ ಆಂಬುಲೆನ್ಸ್‌ ಚಾಲಕನಿಂದ ಲೈಂಗಿಕ ಕಿರುಕುಳ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 10:36 IST
Last Updated 6 ಸೆಪ್ಟೆಂಬರ್ 2020, 10:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರ: ಕೋವಿಡ್‌–19ನಿಂದ ಬಳಲುತ್ತಿದ್ದ 19 ವರ್ಷದ ಯುವತಿಯನ್ನು ಆರೈಕೆ ಕೇಂದ್ರಕ್ಕೆ ಕರೆದೊಯ್ಯುವಾಗ ಆಕೆಗೆ ಆಂಬುಲೆನ್ಸ್‌ ಚಾಲಕ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

ಪಟ್ಟನಂತಿಟ್ಟ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಚಾಲಕನನ್ನು ಅಲಪ್ಪುಳ ಜಿಲ್ಲೆಯ ಕಯಂಕುಳಂ ಮೂಲದ ನೌಫಾಲ್‌ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ಸೈಮನ್‌ ತಿಳಿಸಿದ್ದಾರೆ.

ಕೊಲೆ ಯತ್ನ ಹಾಗೂ ಇತರ ಆರೋಪಗಳಡಿ ಆರೋಪಿ ವಿರುದ್ಧ ಈಗಾಗಲೇ ಪ್ರಕರಣಗಳು ದಾಖಲಾಗಿವೆ. ಕೇರಳ ಮಹಿಳಾ ಆಯೋಗವೂ ಚಾಲಕನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ADVERTISEMENT

ಆಡೂರ್‌ ಎಂಬ ಊರಿನಿಂದ ಪಂಡಾಲಮ್‌ ಎಂಬಲ್ಲಿರುವ ಕೋವಿಡ್‌ ಆರೈಕೆ ಕೇಂದ್ರಕ್ಕೆ ಯುವತಿಯನ್ನು ಕರೆದೊಯ್ಯಲಾಗುತ್ತಿತ್ತು. ಆಂಬುಲೆನ್ಸ್‌ನಲ್ಲಿ ಮತ್ತೊಬ್ಬ ಮಹಿಳೆಯೂ ಇದ್ದರು. ಮಾರ್ಗ ಮಧ್ಯೆ ಆ ಮಹಿಳೆಯನ್ನು ಇಳಿಸಿದ ಚಾಲಕ, ಆಂಬುಲೆನ್ಸ್‌ಅನ್ನು ಆರಾಮುಳ ಎಂಬ ಪ್ರದೇಶಕ್ಕೆ ಒಯ್ದು, ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ, ಚಾಲಕ ಯುವತಿ ಬಳಿ ಕ್ಷಮೆ ಕೋರಿದ್ದಾನೆ. ಕ್ಷಮೆ ಕೋರುತ್ತಿರುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ ಯುವತಿ, ನಂತರ ಅಧಿಕಾರಿಗಳಿಗೆ ಆ ವಿಡಿಯೊ ತುಣುಕುಗಳನ್ನು ನೀಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಘಟನೆಯನ್ನು ಖಂಡಿಸಿರುವ ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಆಂಬುಲೆನ್ಸ್‌ ಚಾಲಕನನ್ನಾಗಿ ನೇಮಿಸಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿರುವ ವಿರೋಧ ಪಕ್ಷಗಳು, ಯುವತಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿವೆ.

ಆಂಬುಲೆನ್ಸ್‌ ಸೇವೆ ಒದಗಿಸುವ ಖಾಸಗಿ ಸಂಸ್ಥೆ ಚಾಲಕನನ್ನು ನೇಮಕ ಮಾಡಿಕೊಂಡಿದೆ. ಆತನನ್ನು ಕೂಡಲೇ ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.