ADVERTISEMENT

ಮುಚ್ಚಿದ ಶಾಲೆ ಪರಿಣಾಮ ತೀವ್ರ: ಸಂಸತ್‌ ಸಮಿತಿಯ ವರದಿಯಲ್ಲಿ ಕಳವಳ

ಸಂಸತ್‌ ಸಮಿತಿಯ ವರದಿಯಲ್ಲಿ ಕಳವಳ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 19:30 IST
Last Updated 8 ಆಗಸ್ಟ್ 2021, 19:30 IST
ಶಾಲೆ
ಶಾಲೆ   

ನವದೆಹಲಿ (ಪಿಟಿಐ): ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ದೀರ್ಘ ಕಾಲ ಶಾಲೆಗಳನ್ನು ಮುಚ್ಚಿದ್ದರಿಂದ ಆಗಿರುವ ಪ‍್ರತಿಕೂಲ ಪರಿಣಾಮಗಳು ನಿರ್ಲಕ್ಷಿಸಲು ಸಾಧ್ಯವಿಲ್ಲದಷ್ಟು ಗಂಭೀರವಾಗಿವೆ ಎಂದುಶಿಕ್ಷಣ, ಮಹಿಳೆ, ಮಕ್ಕಳು, ಯುವ ಜನರು ಮತ್ತು ಕ್ರೀಡೆಯ ಕುರಿತ ಸಂಸತ್‌ ಸ್ಥಾಯಿ ಸಮಿತಿಯ ವರದಿಯು ಹೇಳಿದೆ.

ಶಾಲೆಗಳು ಮುಚ್ಚಿರುವುದು ಕುಟುಂಬಗಳ ಸಾಮಾಜಿಕ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದೇ ಅಲ್ಲದೆ, ಮಕ್ಕಳನ್ನು ಮನೆ ಕೆಲಸದಲ್ಲಿ ತೊಡಗಿಸಿಕೊಳ್ಳುವುದನ್ನೂ ಹೆಚ್ಚಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಶಾಲೆಗಳನ್ನು ಮುಚ್ಚಿರುವುದು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದೆ. ಮಕ್ಕಳು ನಾಲ್ಕು ಗೋಡೆಯ ಒಳಗೆ ಬಂದಿಗಳಾಗಿರುವ ಸ್ಥಿತಿಯು ಹೆತ್ತವರು ಮತ್ತು ಮಕ್ಕಳ ನಡುವಣ ಸಂಬಂಧವನ್ನೂ ಬಾಧಿಸಿದೆ.ಬಾಲ್ಯ ವಿವಾಹ ಮತ್ತು ಅತ್ಯಂತ ಚಿಕ್ಕ ವಯಸ್ಸಿಗೆ ಮದುವೆ ಮಾಡಿಕೊಡುವುದಕ್ಕೂ ಶಾಲೆ ಮುಚ್ಚಿರುವುದು ಕಾರಣವಾಗಿದೆ. ಕಲಿಕಾ ಗುಣಮಟ್ಟ ಕಡಿಮೆ ಎಂಬ ಸಮಸ್ಯೆಯು ಸಾಂಕ್ರಾಮಿಕದ ಆರಂಭಕ್ಕೆ ಮೊದಲೂ ಇತ್ತು. ಸಾಂಕ್ರಾಮಿಕವು ಕಲಿಕಾ ಬಿಕ್ಕಟ್ಟನ್ನು ತೀವ್ರವಾಗಿಸಿದೆ. ದುರ್ಬಲ ಮತ್ತು ಹಿಂದುಳಿದ ಮಕ್ಕಳ ಮೇಲೆ ಪ‍ರಿಣಾಮ ಇನ್ನೂ ಹೆಚ್ಚು ಎಂದು ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

‘ಶಾಲೆ ಮುಚ್ಚಿದ್ದರಿಂದಾಗಿ ಉಂಟಾದ ಕಲಿಕಾ ಅಂತರ ತುಂಬುವ ಯೋಜನೆಗಳು, ಆನ್‌ಲೈನ್‌ ಮತ್ತು ಆಫ್‌ಲೈನ್‌ ಶಿಕ್ಷಣ ಹಾಗೂ ಪರೀಕ್ಷೆಯ ಪರಾಮರ್ಶೆ, ಶಾಲೆ ತೆರೆಯಲು ಯೋಜನೆ’ ಎಂಬ ಹೆಸರಿನ ವರದಿಯನ್ನು ವಿನಯ ಪಿ.ಸಹಸ್ರಬುದ್ಧೆ ನೇತೃತ್ವದ ಸಮಿತಿಯು ಸಿದ್ಧ‍ಪಡಿಸಿದೆ. ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.

ಶಾಲಾ ಮಟ್ಟದ ವಿದ್ಯಾರ್ಥಿಗಳ ಗಣಿತ, ವಿಜ್ಞಾನ ವಿಷಯಗಳು ಮತ್ತು ಭಾಷಾ ಕಲಿಕೆಗೆ ದೊಡ್ಡ ರೀತಿಯಲ್ಲಿ ಹಿನ್ನಡೆ ಆಗಿದೆ. ಕಲಿಕಾ ನಷ್ಟವು ವಿದ್ಯಾರ್ಥಿಗಳ ಗ್ರಹಿಕೆಯ ಸಾಮರ್ಥ್ಯವನ್ನೇ ಕುಗ್ಗಿಸುವ ಅಪಾಯ ಇದೆ. ಬಡವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲೆ ಇದರಿಂದ ಹೆಚ್ಚು ಪರಿಣಾಮ ಆಗಿದೆ. ಈ ಸಮಸ್ಯೆ ಪರಿಹಾರಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವರದಿಯು ಶಿಫಾರಸು ಮಾಡಿದೆ.

ದೇಶದಾದ್ಯಂತ ಲಾಕ್‌ಡೌನ್‌ ಹೇರಿದ್ದರಿಂದಾಗಿ ಕಳೆದ ವರ್ಷದ ಮಾರ್ಚ್‌ನಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಕೆಲವು ರಾಜ್ಯಗಳಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಶಾಲೆ ತೆರೆಯುವ ಯತ್ನ ಮಾಡಲಾಯಿತು. ಆದರೆ, ಕೋವಿಡ್‌–19 ಎರಡನೇ ಅಲೆಯು ಹೆಚ್ಚು ತೀವ್ರಗೊಂಡ ಕಾರಣ ಶಾಲೆಗಳನ್ನು ಮತ್ತೆ ಮುಚ್ಚಲಾಯಿತು.

ಶಿಫಾರಸುಗಳು

lಶಾಲೆಗಳನ್ನು ತೆರೆಯುವ ಬಗ್ಗೆ ಸಮತೋಲನ ಮತ್ತು ತರ್ಕಬದ್ಧವಾದ ಕ್ರಮ ಕೈಗೊಳ್ಳಬೇಕು. ವಿಚಾರವು ಗಂಭೀರವಾಗಿದೆ ಎಂಬುದನ್ನು ನಿರ್ಲಕ್ಷಿಸಬಾರದು

lಶಾಲೆಗಳು ಅತ್ಯಂತ ಬೇಗನೆ ತೆರೆಯುವಂತಾಗಲು ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಬಂಧಿಸಿದ ಸಿಬ್ಬಂದಿಗೆ ಲಸಿಕೆ ಹಾಕಿಸಬೇಕು

lವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ, ಪರ್ಯಾಯ ದಿನಗಳಲ್ಲಿ ತರಗತಿ ನಡೆಸಬಹುದು. ಪಾಳಿಗಳಲ್ಲಿಯೂ ತರಗತಿ ಆರಂಭಿಸಬಹುದು

lವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು ಮತ್ತು ಸದಾ ಕಾಲ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಬೇಕು, ಕೈಯನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳಬೇಕು

lಹಾಜರಾತಿಯ ಹೊತ್ತಿನಲ್ಲಿ ದೇಹದ ತಾಪ ಪರೀಕ್ಷಿಸಬೇಕು, ಸೋಂಕಿತ ವಿದ್ಯಾರ್ಥಿಗಳನ್ನು ಗುರುತಿಸಲು ಆರ್‌ಟಿ–ಪಿಸಿಆರ್‌ ಪರೀಕ್ಷೆ ನಡೆಸಬೇಕು

lಪ್ರತಿ ಶಾಲೆಗೆ ವೈದ್ಯಕೀಯ ಆಮ್ಲಜನಕ ಸಾಂದ್ರಕದ ಕನಿಷ್ಠ ಎರಡು ಯಂತ್ರಗಳನ್ನು ಒದಗಿಸಬೇಕು

lವೈದ್ಯಕೀಯ ನೆರವು ಲಭಿಸುವವರೆಗೆ ವಿದ್ಯಾರ್ಥಿಗಳ ಮೇಲೆ ಗಮನ ಹರಿಸಲು ತರಬೇತಿ ಪಡೆದ ಸಿಬ್ಬಂದಿ ಇರಬೇಕು

lಆರೋಗ್ಯ ನಿರೀಕ್ಷಕರು, ಆರೋಗ್ಯ ಕಾರ್ಯಕರ್ತರು ಆಗಾಗ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು

lಶಾಲೆಗಳನ್ನು ತೆರೆಯಲು ಬೇರೆ ಬೇರೆ ದೇಶಗಳಲ್ಲಿ ಅಳವಡಿಸಿಕೊಳ್ಳಲಾಗಿರುವ ಅತ್ಯುತ್ತಮ ಪದ್ಧತಿಗಳ ಬಗ್ಗೆ ಗಮನ ಹರಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.