ADVERTISEMENT

ಲಸಿಕೆ| 580 ಮಂದಿಗೆ ಅಡ್ಡಪರಿಣಾಮ, 2 ಸಾವು: ಲಸಿಕೆಯಿಂದ ಮರಣವಾಗಿಲ್ಲ ಎಂದ ಕೇಂದ್ರ

ಪಿಟಿಐ
Published 18 ಜನವರಿ 2021, 16:28 IST
Last Updated 18 ಜನವರಿ 2021, 16:28 IST
ದೆಹಲಿಯ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಸಹೋದ್ಯೋಗಿಗೆ ಲಸಿಕೆ ಹಾಕುತ್ತಿರುವ ಆರೋಗ್ಯ ಕಾರ್ಯಕರ್ತು (ಎಎಫ್‌ಪಿ))
ದೆಹಲಿಯ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಸಹೋದ್ಯೋಗಿಗೆ ಲಸಿಕೆ ಹಾಕುತ್ತಿರುವ ಆರೋಗ್ಯ ಕಾರ್ಯಕರ್ತು (ಎಎಫ್‌ಪಿ))   

ನವದೆಹಲಿ: ದೇಶದಲ್ಲಿ ಈ ವರೆಗೆ ಒಟ್ಟು 3,81,305 ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದ ನಂತರ 580 ಜನರಲ್ಲಿ ವ್ಯತಿರಿಕ್ತ ಪರಿಣಾಮಗಳು ಕಾಣಿಸಿಕೊಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ, 'ಸೋಮವಾರ ಒಂದೇ ದಿನ ಸಂಜೆ 5 ಗಂಟೆಯವರೆಗೆ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,48,266 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಅಂದಾಜು ಲೆಕ್ಕಾಚಾರದ ಪ್ರಕಾರ 3,81,305 ಫಲಾನುಭವಿಗಳಿಗೆ ಇದುವರೆಗೆ ಲಸಿಕೆ ನೀಡಲಾಗಿದೆ,' ಎಂದು ತಿಳಿಸಿದರು.

ಸೋಮವಾರ ಲಸಿಕೆ ಪಡೆದ 1,48,266 ಜನರಲ್ಲಿ, 36,888 ಮಂದಿ ಕರ್ನಾಟಕದವರು. ಇನ್ನು ಬಿಹಾರದಲ್ಲಿ-8,656, ಅಸ್ಸಾಂ- 1,822, ಕೇರಳ-7,070, ಮಧ್ಯಪ್ರದೇಶ-6,665, ತಮಿಳುನಾಡು-7,628, ತೆಲಂಗಾಣ-10,352, ಪಶ್ಚಿಮ ಬಂಗಾಳ-11,58, ದೆಹಲಿ-3,111 ಮಂದಿ ಲಸಿಕೆ ಪಡೆದಿದ್ದಾರೆ.

ADVERTISEMENT

ಜನವರಿ 16ರಂದು ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾದ ನಂತರ, ಲಸಿಕೆ ಪಡೆದ 580 ಮಂದಿಯಲ್ಲಿ ವ್ಯತಿರಿಕ್ತ ಪರಿಣಾಮಗಳು ಕಾಣಿಸಿಕೊಂಡಿವೆ. ಈ ಪೈಕಿ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ ಹೇಳಿದ್ದಾರೆ.

ಈ ಏಳು ಮಂದಿಯ ಪೈಕಿ ಇಬ್ಬರು ಕರ್ನಾಟಕದವರು. ಒಬ್ಬರು ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಬ್ಬರು ಚಳ್ಳಕೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉತ್ತರ ಪ್ರದೇಶದ ಮೊರಾಬಾದ್‌ನಲ್ಲಿ ಮತ್ತು ಕರ್ನಾಟಕದ ಬಳ್ಳಾರಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅದರೆ ಅವರ ಸಾವಿಗೆ ಲಸಿಕೆ ಕಾರಣವಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.

ಲಸಿಕೆ ನಂತರ ಗಂಭೀರಗೊಂಡ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದೂ ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.