ADVERTISEMENT

ಕೆಲಸದ ಸ್ಥಳದಲ್ಲೇ ಕೋವಿಡ್‌ ಲಸಿಕೆ: ರಾಜ್ಯಗಳಿಗೆ ಕೇಂದ್ರದಿಂದ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 19:39 IST
Last Updated 7 ಏಪ್ರಿಲ್ 2021, 19:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೆಲಸದ ಸ್ಥಳಗಳಲ್ಲಿಯೇ ಕೋವಿಡ್‌–19 ತಡೆ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರ ಅವಕಾಶ ಕೊಟ್ಟಿದೆ. ಇದು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಅನ್ವಯ. ಆದರೆ, ಲಸಿಕೆ ಪಡೆಯಲು ಅರ್ಹರಾದ ನೂರಕ್ಕೂ ಹೆಚ್ಚು ಮಂದಿ ಇರಬೇಕು. ಭಾನುವಾರದಿಂದ (ಏಪ‍್ರಿಲ್‌ 11) ಇದು ಜಾರಿಗೆ ಬರಲಿದೆ. ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಮಾತ್ರ ಇದು ಅನ್ವಯ. ಅವರ ಕುಟುಂಬದ ಸದಸ್ಯರು ಕೆಲಸದ ಸ್ಥಳದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಇಲ್ಲ.

ಇಂತಹ ಲಸಿಕೆ ಶಿಬಿರಗಳನ್ನು ನಡೆಸುವ ವಿವರವಾದ ಮಾರ್ಗಸೂಚಿಯನ್ನು ಕೇಂದ್ರವು ರಾಜ್ಯಗಳಿಗೆ ಕಳುಹಿಸಿಕೊಟ್ಟಿದೆ. ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಕಾರ್ಯಪಡೆ ಮತ್ತು ನಗರಪಾಲಿಕೆ ಆಯುಕ್ತರ ನೇತೃತ್ವದ ನಗರ ಕಾರ್ಯಪಡೆಯು ಲಸಿಕೆ ಶಿಬಿರ ಆಯೋಜಿಸಬಹುದಾದ ಸಂಸ್ಥೆಗಳನ್ನು ಗುರುತಿಸಲಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳ ಜತೆಗೆ ಸಮನ್ವಯಕ್ಕಾಗಿ ಸಂಸ್ಥೆಯು ಲಸಿಕೆ ಶಿಬಿರಕ್ಕೆ ಒಬ್ಬ ನೋಡಲ್‌ ಅಧಿಕಾರಿಯನ್ನು ನಿಯೋಜಿಸಬೇಕು.

1.15 ಲಕ್ಷ ಪ್ರಕರಣ:ಬುಧವಾರ ಬೆಳಗ್ಗಿನ ವರೆಗಿನ 24 ತಾಸು ಅವಧಿಯಲ್ಲಿ ದೇಶದಲ್ಲಿ ಈವರೆಗಿನ ಗರಿಷ್ಠ ಸಂಖ್ಯೆಯ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. 1.15 ಲಕ್ಷ ಪ್ರಕರಣಗಳು ದೃಢಪಟ್ಟಿವೆ. ಈ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆ 630. ದೇಶದ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆಯು 1.28 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ADVERTISEMENT

ಒಬ್ಬರೇ ಇದ್ದರೂ ಮಾಸ್ಕ್‌ ಕಡ್ಡಾಯ: ಖಾಸಗಿ ವಾಹನದಲ್ಲಿ ಒಬ್ಬರೇ ಸಂಚರಿಸುವಾಗಲೂ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ.

ದಿನಕ್ಕೆಸಾವಿರಸಾವು?: ಕೋವಿಡ್‌–19ರ ಪ್ರಸರಣದ ವೇಗವನ್ನು ಗಮನಿಸಿದರೆ, ಮುಂಬರುವ ವಾರಗಳಲ್ಲಿ ಭಾರತದಲ್ಲಿ ನಿತ್ಯ ಸಾವಿರ ಜನರ ಸಾವು ಸಂಭವಿಸುವ ಸಾಧ್ಯತೆ ಇದೆ. ಅಂತೆಯೇ ದಿನ ಹೊಸ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.