ADVERTISEMENT

ಕಾನೂನು ಬಿಕ್ಕಟ್ಟು: ಭಾರತಕ್ಕೆ ದೊರೆಯದ ಅಮೆರಿಕ ಲಸಿಕೆ

ನಷ್ಟ ಪರಿಹಾರ, ಕಾನೂನು ರಕ್ಷಣೆ ನೀಡಲು ವಿದೇಶಿ ಕಂಪನಿಗಳ ಒತ್ತಾಯ

ರಾಯಿಟರ್ಸ್
Published 28 ಜುಲೈ 2021, 10:58 IST
Last Updated 28 ಜುಲೈ 2021, 10:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕಾನೂನು ಬಿಕ್ಕಟ್ಟಿನಿಂದಾಗಿ ಅಭಿವೃದ್ಧಿ ಹೊಂದಿದ ದೇಶಗಳು ಅನುಮೋದನೆ ನೀಡಿರುವ ಕೋವಿಡ್‌–19 ಲಸಿಕೆಯ ಒಂದೇ ಒಂದು ಡೋಸ್‌ ಸಹ ಭಾರತಕ್ಕೆ ಬಂದಿಲ್ಲ.

ಈ ದೇಶಗಳ ಲಸಿಕೆಗೆ ಸ್ಥಳೀಯವಾಗಿ ಪ್ರಾಯೋಗಿಕ ಪರೀಕ್ಷೆ ನಡೆಸುವ ನಿಯಮಾವಳಿಗಳನ್ನು ಭಾರತ ಸಡಿಲಗೊಳಿಸಿತ್ತು. ಆದರೆ, ಫೈಜರ್‌ ಮತ್ತು ಮಾಡರ್ನಾನಂತಹ ಕಂಪನಿಗಳು ಕಾನೂನು ರಕ್ಷಣೆ ನೀಡಬೇಕು ಎಂದು ಕೋರಿದ್ದವು.

ಇತ್ತೀಚೆಗೆ ಲಕ್ಷಾಂತರ ಲಸಿಕೆ ಡೋಸ್‌ಗಳನ್ನು ಬಾಂಗ್ಲಾದೇಶ, ಭೂತಾನ್‌ ಮತ್ತು ದಕ್ಷಿಣ ಕೊರಿಯಾಗೆ ಅಮೆರಿಕ ನೀಡಿದೆ. ಆದರೆ, ಕೆಲವು ‘ಕಾನೂನು ಅಗತ್ಯ’ಗಳನ್ನು ಪೂರೈಸಲು ಸಾಧ್ಯವಾಗದಿರುವುದರಿಂದ ಭಾರತಕ್ಕೆ ಲಸಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ‘ಕೊವ್ಯಾಕ್ಸ್‌’ ತಿಳಿಸಿದೆ.

ADVERTISEMENT

ಜೂನ್‌ ತಿಂಗಳಲ್ಲಿ ಮಾಡರ್ನಾದ ತುರ್ತು ಬಳಕೆಗೆ ಭಾರತ ಅನುಮೋದನೆ ನೀಡಿತ್ತು. ಆದರೆ, ಫೈಜರ್‌ ಹಾಗೂ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಭಾರತದಲ್ಲಿ ಲಸಿಕೆ ಬಳಸಲು ಅನುಮತಿಯನ್ನು ಕೋರಿಲ್ಲ.

‘ಲಸಿಕಾ ತಯಾರಿಸುವ ಕಂಪನಿಗಳ ಜತೆ ಚರ್ಚೆ ನಡೆಸಲು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಈ ತಂಡವು ಫೈಜರ್‌, ಮಾಡರ್ನಾ ಹಾಗೂ ಜಾನ್ಸನ್‌ ಮತ್ತು ಜಾನ್ಸನ್‌ ಜತೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದು, ಲಸಿಕೆ ಪೂರೈಕೆಗೆ ತೊಡಕಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ನಡೆಸಿದೆ. ನಷ್ಟ ಪರಿಹಾರದ ಬಗ್ಗೆಯೂ ತಂಡವು ಚರ್ಚೆ ನಡೆಸುತ್ತಿದೆ’ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಸಂಸತ್‌ನಲ್ಲಿ ಮಂಗಳವಾರ ತಿಳಿಸಿದ್ದಾರೆ.

ವಿದೇಶಿ ಲಸಿಕೆಗಳಿಗೆ ನಷ್ಟ ಪರಿಹಾರ ನೀಡುವುದಾದರೆ ಭಾರತದ ತಯಾರಕರಿಗೂ ಇದೇ ನಿಯಮಗಳನ್ನು ಅನ್ವಯಿಸಬೇಕು ಎಂದು ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಪ್ರತಿಪಾದಿಸಿದೆ.

ಮಾಡರ್ನಾದ ಭಾರತದ ಸಹಭಾಗಿ ಸಿಪ್ಲಾ ಕೆಲವು ಕಾನೂನಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿತ್ತು. ಆದರೆ, ಅಮೆರಿಕ ಕಂಪನಿ ಈ ಪ್ರಸ್ತಾವವನ್ನು ತಿರಸ್ಕರಿಸಿತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

‘ಸರ್ಕಾರ ಯಾರಿಗೂ ನಷ್ಟ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.