ADVERTISEMENT

ಕೋವಿಡ್-19 ಭೀತಿ: ಭಾರತದಾದ್ಯಂತ ಲಾಕ್‌ಡೌನ್‌ ಆಗಿರುವ ಜನರೆಷ್ಟು ಗೊತ್ತಾ?

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 14:23 IST
Last Updated 24 ಮಾರ್ಚ್ 2020, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಸರ್ಕಾರವುಪ್ರಯಾಣ ನಿರ್ಬಂಧದ ಜೊತೆಗೆ ಹಲವು ಕರ್ಫ್ಯೂ ಮಾದರಿ ನಿಷೇಧಾಜ್ಞೆಗಳನ್ನು ಜಾರಿಗೊಳಿಸಿದೆ. ವಿವಿಧ ರಾಜ್ಯ ಸರ್ಕಾರಗಳು ಜಾರಿ ಮಾಡಿರುವ ನಿರ್ಬಂಧದ ಆದೇಶಗಳನ್ನು ಅನುಸರಿಸಿ ಲೆಕ್ಕ ಹಾಕಿದರೆ, ದೇಶದ ಸುಮಾರು 100 ಕೋಟಿ ಜನರು ಅಂದರೆ ಭಾರತದಜನಸಂಖ್ಯೆಯ ಶೇ 90 ರಷ್ಟು ಜನರು ಲಾಕ್‌ಡೌನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಜಿಲ್ಲೆಗಳು ಮಂಗಳವಾರ ಮಧ್ಯಾಹ್ನದಿಂದಲೇ ಸಂಪೂರ್ಣವಾಗಿ ಸ್ಥಬ್ಧವಾಗಿವೆ. ಅಂದರೆ 560 ಜಿಲ್ಲೆಗಳ ಜನರು ತಮ್ಮ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಜನಗಣತಿ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದ ಒಟ್ಟು ಒಟ್ಟು ಜನಸಂಖ್ಯೆ120 ಕೋಟಿ. ಪ್ರತಿ ನಾಲ್ವರಲ್ಲಿ ಮೂವರು ನಿರ್ಬಂಧದ ಆದೇಶಗಳಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಿಲ್ಲ. ಅಲ್ಲಿ ಕೆಲವು ಪ್ರದೇಶಗಳನ್ನು ಮಾತ್ರ ಮುಚ್ಚಲಾಗಿದೆ. ಲಕ್ಷದ್ವೀಪದಲ್ಲಿ ಕೆಲವು ಚಟುವಟಿಕೆಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗಿದೆ.

ADVERTISEMENT

ಉತ್ತರ ಪ್ರದೇಶದಲ್ಲಿ 16 ಜಿಲ್ಲೆಗಳು ಲಾಕ್‌ಡೌನ್ ಅಡಿಯಲ್ಲಿದ್ದು, ಇಲ್ಲಿ 6.6 ಕೋಟಿಜನರು ನಿರ್ಬಂಧಕ್ಕೊಳಗಾಗಿದ್ದಾರೆ. ಇದು ರಾಜ್ಯದ ಜನಸಂಖ್ಯೆಯ ಸುಮಾರು 200 ದಶಲಕ್ಷದ ಮೂರನೇ ಒಂದು ಭಾಗವಾಗಿದೆ. ಮಧ್ಯಪ್ರದೇಶದಲ್ಲಿ 37 ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಿಸಿದ್ದು, ಎರಡರಲ್ಲಿ ಕರ್ಫ್ಯೂ ವಿಧಿಸಲಾಗಿದೆ. ರಾಜ್ಯದ 7.3 ಕೋಟಿ ಜನಸಂಖ್ಯೆಯ ಪೈಕಿ ಶೇ 80ರಷ್ಟು ಅಂದರೆ 5.7 ಕೋಟಿ ಜನರು ನಿರ್ಬಂಧಕ್ಕೊಳಪಟ್ಟಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ದೇಶದಾದ್ಯಂತ 600 ಜಿಲ್ಲೆಗಳಲ್ಲಿ ಒಂದು 100 ಕೋಟಿಜನರು ಲಾಕ್‌ಡೌನ್‌ ಅಡಿಯಲ್ಲಿ ವಾಸಿಸುತ್ತಿದ್ದಾರೆ. ಅಂದರೆ 10 ಜನ ಭಾರತೀಯರಲ್ಲಿ ಒಂಬತ್ತು ಜನರು (ಶೇ87.7) ನಿರ್ಬಂಧಕ್ಕೊಳಪಟ್ಟಿದ್ದಾರೆ.

ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಿರುವುದರಿಂದಾಗಿ ಭಾರತವು ಈಗಾಗಲೇ ಮಾರ್ಚ್ 31ರವರೆಗೆ ದೇಶೀಯ ವಿಮಾನ ಸೇವೆ ಮತ್ತು ರೈಲ್ವೆ ಸೇವೆಯನ್ನು ನಿಷೇಧಿಸಿದೆ. ಮಾರ್ಚ್ 22ರಿಂದಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಯನ್ನು ಕೂಡ ನಿಲ್ಲಿಸಲಾಗಿದೆ. ಈ ನಿರ್ಬಂಧವು ಏಳು ದಿನಗಳವರೆಗೆ ಇರಲಿದೆ. ಇದಲ್ಲದೆ ಇತರೆ ಸಂಚಾರಕ್ಕೂ ಕೂಡ ನಿರ್ಬಂಧ ವಿಧಿಸಲಾಗಿದ್ದು, ಆದೇಶಗಳನ್ನು ಪಾಲಿಸದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.

ದೇಶಾದ್ಯಂತ ದಿನದಿಂದ ದಿನಕ್ಕೆ ಭೀಕರತೆಯನ್ನು ಪ್ರದರ್ಶಿಸುತ್ತಲೇ ಇರುವ ಕೊರೊನಾ ವೈರಸ್ ದಾಳಿಗೆ ಭಾರತದಲ್ಲಿ ಈಗಾಗಲೇ ಒಂಬತ್ತು ಜನರು ಮೃತಪಟ್ಟಿದ್ದು, 492 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.