ADVERTISEMENT

ಕೋವಿಡ್ -19 | 15 ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಸಾವಿನ ಸಂಖ್ಯೆ ದುಪ್ಪಟ್ಟು

ಜುಲ್ಫಿಕರ್ ಮಜಿದ್
Published 16 ಜುಲೈ 2020, 6:55 IST
Last Updated 16 ಜುಲೈ 2020, 6:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಕಳೆದ 15 ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಕೋವಿಡ್-19 ರೋಗದಿಂದ 108 ಮಂದಿ ಸಾವಿಗೀಡಾಗಿದ್ದಾರೆ.
ಮೊದಲ 115 ದಿನಗಳಲ್ಲಿ (ಮಾರ್ಚ್ 8- ಜೂನ್ 30) ಜಮ್ಮು ಕಾಶ್ಮೀರದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 101 ಆಗಿದೆ. ಈ ಪೈಕಿ 89 ಮಂದಿ ಕಾಶ್ಮೀರದವರು ಮತ್ತು 12 ಮಂದಿ ಜಮ್ಮು ನಿವಾಸಿಗಳಾಗಿದ್ದಾರೆ.

ಆದಾಗ್ಯೂ, ಜುಲೈ 1ರಿಂದ ಜುಲೈ 15ರ ವರೆಗೆ ಕಾಶ್ಮೀರದಲ್ಲಿ 102 ಮಂದಿ ಮತ್ತು ಜಮ್ಮುನಲ್ಲಿ 6 ಮಂದಿ ಮೃತಪಟ್ಟಿದ್ದಾರೆ.

ಎರಡು ವಾರಗಳಲ್ಲಿ ಸಾವಿನ ಸಂಖ್ಯೆ ದುಪ್ಪಟ್ಟು ಆಗುತ್ತಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿದೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಿರವುದರಿಂದ ಸಮುದಾಯದಲ್ಲಿ ಹೆಚ್ಚಿನ ಮಂದಿಗೆ ಕೊರೊನಾ ಸೋಂಕು ತಗುಲಿರುವುದನ್ನು ಸೂಚಿಸುತ್ತದೆ. ಅತೀ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಮಾತ್ರ ಆಸ್ಪತ್ರೆಗಳಲ್ಲಿ ದಾಖಲಿಸಲಾಗುತ್ತಿದೆ.

ADVERTISEMENT

ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ 493 ಮಂದಿಗೆ ಕೋವಿಡ್ ದೃಢಪಟ್ಟಿತ್ತು. ಒಟ್ಟು ಸೋಂಕಿತರ ಸಂಖ್ಯೆ 11, 666ಕ್ಕೇರಿದೆ. ಈ ಪೈಕಿ ಕಾಶ್ಮೀರದಲ್ಲಿ 9221 ಪ್ರಕರಣಗಳು ಮತ್ತು ಜಮ್ಮುನಲ್ಲಿ 2445 ಪ್ರಕರಣಗಳು ವರದಿಯಾಗಿವೆ.

ಕಾಶ್ಮೀರದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ,78.62 ಆಗಿದ್ದು, ಜಮ್ಮುನಲ್ಲಿ ಶೇ. 21.37 ಆಗಿದೆ ಎಂದು ಸರ್ಕಾರಿ ಅಂಕಿಅಂಶಗಳು ಹೇಳಿವೆ.

ಏತನ್ಮಧ್ಯೆ, ಸಾವಿನ ಸಂಖ್ಯೆ ವರದಿಯಾಗಿರುವುದಕ್ಕಿಂತಲೂ ಜಾಸ್ತಿ ಇದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಜನರು ಸೋಂಕು ಪರೀಕ್ಷೆ ನಡೆಸಲು ಹಿಂಜರಿಯುತ್ತಿರುವ ಕಾರಣ, ಸೋಂಕಿನಿಂದ ಸಾವಿಗೀಡಾದ ಪ್ರಕರಣಗಳು ವರದಿಯಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಕಾಶ್ಮೀರದಲ್ಲಿ ಕೋವಿಡ್‌ನಿಂದಾಗಿ ಸಾವಿಗೀಡಾದವರ ಸಂಖ್ಯೆ ಸರ್ಕಾರಿ ಅಂಕಿಅಂಶಗಳಲ್ಲಿ ದಾಖಲಾಗಿರುವುದಕ್ಕಿಂತ ವಾಸ್ತವ ಸ್ಥಿತಿ ಬೇರೆಯೇ ಇದೆ ಎಂದು ಕಾಶ್ಮೀರದ ವೈದ್ಯರ ಸಂಘಟನೆ (ಡಿಎಕೆ) ಅಧ್ಯಕ್ಷ ಡಾ. ನಿಸಾರ್ ಅಲ್ ಹಸ್ಸನ್ ಹೇಳಿದ್ದಾರೆ.

ಈ ನಡುವೆ ಜನರಲ್ಲಿ ಗೊಂದಲ ತಡೆಯುವುದಕ್ಕಾಗಿ ಕೋವಿಡ್-19ಗೆ ಸಂಬಂಧಿಸಿದ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಜಮ್ಮು ಕಾಶ್ಮೀರ ಆಡಳಿತಾಧಿಕಾರಿಗಳು ಆಸ್ಪತ್ರೆಗಳ ವೈದ್ಯರಿಗೆಹೇಳಿದ್ದಾರೆ.

ಕೋವಿಡ್-19ಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಆರ್ಥಿಕ ಆಯುಕ್ತ ಅಟಲ್ ದುಲೋ ಅವರು ಜಮ್ಮು ಪ್ರಕಟಣೆ ಹೊರಡಿಸಿದ್ದಾರೆ. ಎಸ್‌ಕೆಐಎಂಎಸ್ ಸೌರ, ಜಿಎಂಸಿ ಶ್ರೀನಗರ/ಜಮ್ಮು, ಎಸ್‌ಕೆಐಎಂಎಸ್ ಬೆಮಿನಾ ಮತ್ತು ಜಮ್ಮು ಕಾಶ್ಮೀರದ ಆರೋಗ್ಯ ನಿರ್ದೇಶನಾಲಯಗಳಿಗೆ ಈ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.