ADVERTISEMENT

ಲಾಕ್‌ಡೌನ್‌ 2 | ರೈಲು ಸಂಚಾರ, ವಿಮಾನ ಹಾರಾಟ ಮೇ 3ರ ವರೆಗೂ ರದ್ದು

ಏಜೆನ್ಸೀಸ್
Published 14 ಏಪ್ರಿಲ್ 2020, 7:27 IST
Last Updated 14 ಏಪ್ರಿಲ್ 2020, 7:27 IST
ರೈಲು ಮತ್ತು ವಿಮಾನ ಸೇವೆ ರದ್ದು
ರೈಲು ಮತ್ತು ವಿಮಾನ ಸೇವೆ ರದ್ದು    

ನವದೆಹಲಿ: ಭಾರತೀಯ ರೈಲ್ವೆ ಮೇ 3ರ ವರೆಗೂ ಎಲ್ಲ ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಲಾಕ್‌ಡೌನ್‌ ವಿಸ್ತರಿಸಿರುವುದಾಗಿ ಘೋಷಿಸಿದ ಬೆನ್ನಲ್ಲೇ ಭಾರತೀಯ ರೈಲ್ವೆ ನಿರ್ಧಾರ ಕೈಗೊಂಡಿದೆ. ವಿಮಾನ ಸಂಚಾರವೂ ಇರುವುದಿಲ್ಲ.

ಕೋವಿಡ್‌–19 ನಿಯಂತ್ರಿಸುವ ನಿಟ್ಟಿನಲ್ಲಿ ಪ್ರೀಮಿಯಂ ರೈಲುಗಳು, ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳು, ಉಪನಗರ ರೈಲುಗಳು, ಕೋಲ್ಕತ್ತಾ ಮೆಟ್ರೋ ರೈಲು, ಕೊಂಕಣ ರೈಲ್ವೆ, ಸೇರಿದಂತೆ ಎಲ್ಲ ಪ್ರಯಾಣಿಕ ರೈಲು ಸೇವೆಗಳನ್ನು ಮೇ 3ರ ವರೆಗೂ ರದ್ದು ಪಡಿಸಿರುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ.

ಅಗತ್ಯ ವಸ್ತುಗಳ ಪೂರೈಕೆಗಾಗಿ ದೇಶದ ವಿವಿಧ ಭಾಗಗಳಿಗೆ ಸರಕು ಮತ್ತು ಸಾಗಣಿಕೆಗಳಿಗೆ ಗೂಡ್ಸ್‌ ರೈಲುಗಳು ಕಾರ್ಯಾಚರಣೆ ಮುಂದುವರಿಸಲಿವೆ. ರೈಲ್ವೆ ಟಿಕೆಟ್‌ ಬುಕ್ಕಿಂಗ್‌ನ ಎಲ್ಲ ಕೌಂಟರ್‌ ಮೇ 3ರ ವರೆಗೂ ಮುಚ್ಚಿರಲಿವೆ ಎಂದು ಹೇಳಿದೆ.

ADVERTISEMENT

ಎಲ್ಲ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದತಿಯನ್ನು ಮೇ 3ರ ವರೆಗೂ ಮುಂದುವರಿಸಿರುವುದಾಗಿ ವಿಮಾನಯಾನ ಸಚಿವಾಲಯ ಆದೇಶಿಸಿದೆ.

ಕೆಲವು ವಿಮಾನಯಾನ ಸಂಸ್ಥೆಗಳು ಸಿಬ್ಬಂದಿ ವೇತನ ಕಡಿತಗೊಳಿಸಿದ್ದರೆ, ಇನ್ನೂ ಕೆಲವು ಸಂಸ್ಥೆಗಳು ವೇತನ ರಹಿತ ಕಡ್ಡಾಯ ರಜೆ ಘೋಷಿಸಿವೆ. ಈ ಹಿಂದೆ ಮಾಡಲಾಗಿದ್ದ ಟಿಕೆಟ್‌ ಬುಕ್ಕಿಂಗ್‌ಗಳನ್ನುರದ್ದುಗೊಳಿಸಲಾಗಿದೆ. ಸರಕು ಸಾಗಣೆ ವಿಮಾನಗಳು, ಹೆಲಿಕಾಪ್ಟರ್‌ಗಳು ಹಾಗೂ ವೈದ್ಯಕೀಯ ತುರ್ತು ಸೇವೆಗಳಿಗಾಗಿ ವಿಮಾನ ಹಾರಾಟಕ್ಕೆ ಅವಕಾಶವಿದೆ ಎಂದು ಡಿಜಿಸಿಎ ಹೇಳಿದೆ.

ದೇಶದಾದ್ಯಂತ ಈಗಾಗಲೇ ಕೋವಿಡ್‌–19 ದೃಢಪಟ್ಟಿರುವ ಪ್ರಕರಣಗಳ ಸಂಖ್ಯೆ 10,000 ದಾಟಿದೆ. ಏಪ್ರಿಲ್‌ 14ರ ವರೆಗೂ ವಿಧಿಸಲಾಗಿದ್ದ ಲಾಕ್‌ಡೌನ್‌ ವಿಸ್ತರಿಸಲು ಬಹುತೇಕ ರಾಜ್ಯ ಸರ್ಕಾರಗಳು ಮುಂದೆ ಬಂದಿವೆ ಎಂದು ಪ್ರಧಾನಿ ಭಾಷಣದಲ್ಲಿ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.