ADVERTISEMENT

ಅರ್ಥ ವಿವರ | ಇಟಾಲಿಯನ್ ಪದ 'ಕ್ವಾರಂಟಿನಾ' ಎಂದರೆ 40 ದಿನಗಳು: ಐಸೊಲೇಷನ್ ಎಂದರೆ?

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 8:07 IST
Last Updated 30 ಮಾರ್ಚ್ 2020, 8:07 IST
ವ್ಯಕ್ತಿಯೊಬ್ಬರ ಕೈಯ ಮೇಲೆ ಹೋಂ ಕ್ವಾರಂಟೈನ್‌ ಮುದ್ರೆ ಹಾಕಿರುವುದು– ಸಂಗ್ರಹ ಚಿತ್ರ
ವ್ಯಕ್ತಿಯೊಬ್ಬರ ಕೈಯ ಮೇಲೆ ಹೋಂ ಕ್ವಾರಂಟೈನ್‌ ಮುದ್ರೆ ಹಾಕಿರುವುದು– ಸಂಗ್ರಹ ಚಿತ್ರ   
""

ಕೊರೊನಾ ವೈರಸ್‌ ಸೋಂಕು ತಡೆಯಲು ಲಾಕ್‌ಡೌನ್‌ ಬಿಟ್ಟರೆ ಬೇರೆ ದಾರಿ ಕಾಣುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ತಿಳಿಸುತ್ತ ಕ್ಷಮೆಯಾಚಿಸಿದರು. 'ಮನೆಯಿಂದ ಹೊರ ಬರಬೇಡಿ, ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳಿ, ಹೋಂ ಕ್ವಾರಂಟೈನ್‌ ಆಗಿ,...' ಈ ಸಾಲುಗಳನ್ನು ನಿತ್ಯ ಪದೇ ಪದೇ ಕೇಳುತ್ತಲೇ ಇದ್ದೇವೆ. ಪತ್ರಿಕೆ, ಟಿವಿ, ಮೊಬೈಲ್‌ ಎಲ್ಲೆಲ್ಲೂ ಜಾಗೃತಿ ಮೂಡಿಸುವ ಸಂದೇಶಗಳದ್ದೇ ಮೇಲುಗೈ. ಜಾಗತಿಕವಾಗಿ 6,34,000 ಅಧಿಕ ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ ಹಾಗೂ ಸುಮಾರು 30,000 ಜನರು ಮೃತಪಟ್ಟಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ಔಷಧಿ ಲಭ್ಯವಿಲ್ಲ. ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸಲು ಹಲವು ಮಾರ್ಗಗಳ ಹುಡುಕಾಟದ ನಂತರ 'ಕ್ವಾರಂಟೈನ್‌' ಎಂಬ ತಂತ್ರ ಅತ್ಯಂತ ಸೂಕ್ತವೆಂಬ ನಿರ್ಧಾರಕ್ಕೆ ಬರಲಾಗಿದೆ. ಆದರೆ, ಕ್ವಾರಂಟೈನ್‌ ಎಂದರೆ ಏನು? ಇದಕ್ಕೂ ಐಸೊಲೇಷನ್‌ ಏನು ವ್ಯತ್ಯಾಸ?

ಒಟ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಪೈಕಿ ಶೇ 5ರಷ್ಟು ಸಾವಿನಲ್ಲಿ ಕೊನೆಯಾಗಿದೆ. ಸೋಂಕು ಹರಡದಂತೆಯೇ ತಡೆಯುವುದು ಸದ್ಯದ ಉತ್ತಮ ಮಾರ್ಗವಾಗಿದೆ. ಅದನ್ನು ಸಾಧಿಸಲು ಹೋಂ ಕ್ವಾರಂಟೈನ್‌ ಆಗಿರುವುದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಿದೆ. ಆಕ್ಸ್‌ಫರ್ಡ್‌ ಡಿಕ್ಷನರಿ ಪ್ರಕಾರ ಕ್ವಾರಂಟೈನ್‌ ಎಂದರೆ, 'ಬೇರೆ ಸ್ಥಳಗಳಿಂದ ಬಂದಿರುವ ಮನುಷ್ಯ ಅಥವಾ ಪ್ರಾಣಿಗಳನ್ನು ಪ್ರತ್ಯೇಕ ಸ್ಥಳದಲ್ಲಿ, ನಿರ್ದಿಷ್ಟ ಸಮಯ ಇರಿಸುವುದು. ಅಥವಾ ಸಾಂಕ್ರಾಮಿ ಅಥವಾ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗಿರುವವರನ್ನು ಪ್ರತ್ಯೇಕವಾಗಿರಿಸುವುದು.' ಅಂದರೆ, ಸೋಂಕಿಗೆ ಒಳಗಾಗಿರುವ ಶಂಕೆ ಇದ್ದರೆ ಅವರನ್ನು ಹೊರ ಜಗತ್ತಿನ ಸಂಪರ್ಕದಿಂದ ದೂರ ಉಳಿಸುವ ಮೂಲಕ ಸೋಂಕು ವ್ಯಾಪಿಸುವುದನ್ನು ತಡೆಯುವುದು.

ಇಟಾಲಿಯನ್‌ ಪದ 'ಕ್ವಾರಂಟಿನಾ'ದಿಂದ ಕ್ವಾರಂಟೈನ್‌ ಬಳಕೆಗೆ ಬಂದಿದೆ. ಕ್ವಾರಂಟಿನಾ ಎಂದರೆ '40 ದಿನಗಳು' ಎಂಬ ಅರ್ಥವಿದೆ.

ADVERTISEMENT

14ನೇ ಶತಮಾನದಲ್ಲಿ ಮಾರಣಾಂತಿಕವಾದ ಪ್ಲೇಗ್‌ ವ್ಯಾಪಿಸುತ್ತಿತ್ತು. ಪ್ಲೇಗ್‌ ಹೊತ್ತು ತರುತ್ತಿರುವುದಾಗಿ ಶಂಕಿಸಲಾದ ಹಡಗುಗಳನ್ನು ಇಟಲಿಯ ವೆನಿಸ್‌ನಲ್ಲಿ ಲಂಗರು ಹಾಕಿ ಪ್ರತ್ಯೇಕಿಸಲಾಗುತ್ತಿತ್ತು. 40 ದಿನಗಳ ವರೆಗೂ ಪ್ರತ್ಯೇಕಿಸುವ ಕ್ರಮ ಅಳವಡಿಸಿಕೊಳ್ಳಲಾಗಿತ್ತು. ಪ್ರಸ್ತುತ ಕ್ವಾರಂಟೈನ್‌ ಎಂಬುದನ್ನು ಕೋವಿಡ್‌–19 ಹಿನ್ನೆಲೆಯಲ್ಲಿ ಮನೆಯಲ್ಲಿ ಉಳಿಯುವುದನ್ನು ಸೂಚಿಸಲು ಬಳಸಲಾಗುತ್ತಿದೆ.

ಕಂಪ್ಯೂಟರ್‌ ಕಾರ್ಯಾಚರಣೆಗಳನ್ನೂ ಇದರ ಬಳಕೆ ಇದೆ. ಉತ್ತಮ ಕಾರ್ಯಾಚರಣೆಯಲ್ಲಿರುವ ಕಂಪ್ಯೂರ್‌ಗೆ ಮಾರಕವಾಗಬಹುದಾದ ವೈರಸ್‌ ಸೋಂಕು ವ್ಯಾಪಿಸದಂತೆ ತಡೆಯಲು ಆ್ಯಂಟಿ ವೈರಸ್‌ ಸಾಫ್ಟ್‌ವೇರ್‌ ಕ್ವಾರಂಟೈನ್‌ ತಂತ್ರ ಬಳಸುತ್ತದೆ. ಮೆಕಫೆ, ಕ್ಯಾಸ್ಪರ್‌ಸೈ, ಎವಿಜಿ,.. ಯಾವುದೇ ಆ್ಯಂಟಿ ವೈರಸ್‌ ಸಾಫ್ಟ್‌ವೇರ್‌ನಲ್ಲೂ ನೀವು ಇದನ್ನು ಗಮನಿಸಬಹುದು. ಸಾಫ್ಟ್‌ವೇರ್‌ ಹಾನಿ ಮಾಡುವಂತಹ ವೈರಸ್‌ ಕಂಡು ಬಂದ ಕೂಡಲೇ ಅದನ್ನು ಪ್ರತ್ಯೇಕಿಸಿ; ಕಂಪ್ಯೂಟರ್‌ಗೆ ರಕ್ಷಣೆ ಕೊಡುವ ಕಾರ್ಯ ನಡೆಸುತ್ತದೆ.

ಐಸೊಲೇಷನ್‌ಗಿಂತ ಕ್ವಾರಂಟೈನ್‌ ಹೇಗೆ ಭಿನ್ನ?

ಪ್ರತ್ಯೇಕವಾಗಿಸುವುದನ್ನೇ ಐಸೊಲೇಷನ್‌ ಎನ್ನಲಾಗುತ್ತದೆ. ಹಾಗಾದರೆ, ಕ್ವಾರಂಟೈನ್‌ ಎಂದರೆ ಐಸೊಲೇಷನ್‌ನ ಮತ್ತೊಂದು ರೂಪವಷ್ಟೇ. ಆದರೆ, ಐಸೊಲೇಷನ್‌ ಶಬ್ದ ವೈದ್ಯಕೀಯ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಸೋಂಕು ದೃಢಪಟ್ಟಿರುವ ವ್ಯಕ್ತಿಯನ್ನು ಆರೋಗ್ಯವಂತರಿಂದ ಪ್ರತ್ಯೇಕಿಸುವ ಮೂಲಕ ಸೋಂಕು ಹರಡುವುದನ್ನು ತಪ್ಪಿಸುವುದನ್ನು ಐಸೊಲೇಷನ್‌ ಎನ್ನಬಹುದು.

ಸೋಂಕು ಇರುವುದು ದೃಢಪಟ್ಟರೆ ಅಥವಾ ಶಂಕೆ ವ್ಯಕ್ತವಾದರೆ ಸೆಲ್ಫ್‌ ಐಸೊಲೇಷನ್‌ಗೆ (ಸ್ವತಃ ಇತರರಿಂದ ಪ್ರತ್ಯೇಕವಾಗಿ ವಾಸ) ಒಳಪಡುವುದೂ ನಡೆಯುತ್ತಿದೆ. ಕ್ವಾರಂಟೈನ್ ಹಾಗೂ ಐಸೊಲೇಷನ್ ಎರಡಕ್ಕೂ ಇರುವ ವ್ಯತ್ಯಾಸವನ್ನು ಈ ಮೂಲಕ ತಿಳಿಯಬಹುದಾಗಿದೆ. ಆರೋಗ್ಯವಂತ ಜನರು ತಮಗೆ ಸೋಂಕು ತಾಗದಂತೆ ತಡೆಯಲು ಸ್ವಯಂ ನಿರ್ಧಾರ ಮಾಡಿ ಮನೆಯಲ್ಲೇ ಪ್ರತ್ಯೇಕವಾಗಿರುವುದು ಕ್ವಾರಂಟೈನ್ ಎನಿಸಿಕೊಳ್ಳುತ್ತದೆ. ಆದರೆ, ಕೋವಿಡ್ ಶಂಕೆ ಇರುವವರು ಮತ್ತು ಸೋಂಕಿಗೆ ಒಳಗಾಗಿರುವವರನ್ನು ಇತರರಿಗೆ ವೈರಾಣು ಹರಡದಂತೆ ತಡೆಯಲು ಅವರನ್ನು ಏಕಾಂಗಿಯಾಗಿ ಇರಿಸುವುದು ಐಸೊಲೇಷನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.