ADVERTISEMENT

‘ಕೋವಿಶೀಲ್ಡ್’ ರವಾನೆ –ಅಭಿಯಾನಕ್ಕೆ ಸಿದ್ಧತೆ

ಪುಣೆಯ ಸೀರಂ ಸಂಸ್ಥೆಯಿಂದ 13 ನಗರಗಳಿಗೆ 56 ಲಕ್ಷ ಡೋಸ್ ಲಸಿಕೆ ಪೂರೈಕೆ

ಪಿಟಿಐ
Published 12 ಜನವರಿ 2021, 19:30 IST
Last Updated 12 ಜನವರಿ 2021, 19:30 IST
ನವದೆಹಲಿಯಲ್ಲಿ ಮಂಗಳವಾರ ಕೋವಿಶೀಲ್ಡ್‌ ಲಸಿಕೆಗಳನ್ನು ಪೊಲೀಸ್‌ ಭದ್ರತೆಯಲ್ಲಿ ಸಾಗಿಸಲಾಯಿತು
ನವದೆಹಲಿಯಲ್ಲಿ ಮಂಗಳವಾರ ಕೋವಿಶೀಲ್ಡ್‌ ಲಸಿಕೆಗಳನ್ನು ಪೊಲೀಸ್‌ ಭದ್ರತೆಯಲ್ಲಿ ಸಾಗಿಸಲಾಯಿತು   

ನವದೆಹಲಿ/ಪುಣೆ: ಕೋವಿಡ್ ವಿರುದ್ಧ ದೇಶವ್ಯಾಪಿ ಲಸಿಕೆ ಅಭಿಯಾನ ಕೈಗೊಳ್ಳಲು ಸಿದ್ಧತೆ ಚುರುಕುಗೊಂಡಿದ್ದು, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನಿಂದ 56 ಲಕ್ಷ ಡೋಸ್ ಲಸಿಕೆಯನ್ನು ಮಂಗಳವಾರ ವಿವಿಧ ರಾಜ್ಯಗಳಿಗೆ ರವಾನಿಸಲಾಯಿತು.

ಜ.16ರಂದು ಅಭಿಯಾನ ಆರಂಭಿ ಸಲು ನಿರ್ಧರಿಸಿದ್ದು, ಪುಣೆಯಿಂದ 13 ನಗರಗಳಿಗೆ ವಿಮಾನದಲ್ಲಿ ಲಸಿಕೆ ರವಾನೆ ಮಾಡಲಾಗಿದೆ. ನಾಗರಿಕ ವಿಮಾನ ಯಾನ ಸಚಿವ ಹರ್‌ದೀಪ್‌ ಸಿಂಗ್ ಪುರಿ ಟ್ವೀಟ್‌ ಮೂಲಕ ಇದನ್ನು ಪ್ರಕಟಿಸಿದರು.

ಸ್ಪೈಸ್‌ಜೆಟ್, ಗೋ ಏರ್, ಇಂಡಿಗೋ ಮತ್ತು ಏರ್‌ಇಂಡಿಯಾ ವಿಮಾನಯಾನ ಸಂಸ್ಥೆಗಳು 9 ವಿಮಾನ ಗಳನ್ನು ಈ ಉದ್ದೇಶಕ್ಕಾಗಿ ಕಾರ್ಯಾಚರಣೆಗೊಳಿಸಿದವು.

ADVERTISEMENT

ಅಲ್ಲದೆ, ಗುವಾಹಟಿ (2.70 ಲಕ್ಷ ಡೋಸ್), ಕೋಲ್ಕೊತ್ತ (9.96 ಲಕ್ಷ) ಹೈದರಾಬಾದ್ (3.70 ಲಕ್ಷ), ಭುವನೇಶ್ವರ (4.80 ಲಕ್ಷ), ಬೆಂಗಳೂರು (6.48 ಲಕ್ಷ), ಪಾಟ್ನಾ (5.52 ಲಕ್ಷ) ಹಾಗೂ ವಿಜಯವಾಡ (4.08 ಲಕ್ಷ) ನಗರಗಳಿಗೆ ಲಸಿಕೆಗಳನ್ನು ಸಾಗಣೆ ಮಾಡಲಾಗಿದೆ ಎಂದು ಸ್ಪೈಸ್‌ಜೆಟ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಅಜಯ್‌ಸಿಂಗ್ ಹೇಳಿದರು.

ಲಸಿಕೆಗಳನ್ನು ಹೊತ್ತ ಲಾರಿಗಳು ಸೀರಂ ಇನ್‌ಸ್ಟಿಟ್ಯೂಟ್ ಆವರಣದಿಂದ ವಿಮಾನನಿಲ್ದಾಣಕ್ಕೆ ನಿರ್ಗಮಿಸುವ ಮುನ್ನ ‘ಪೂಜೆ’ ನೆರವೇರಿಸಲಾಯಿತು.

‘ಏಪ್ರಿಲ್‌ ವೇಳೆಗೆ ಮತ್ತೆ 4.5 ಕೋಟಿ ಡೋಸ್‌ ಖರೀದಿ‘:ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಏಪ್ರಿಲ್‌ ವೇಳೆಗೆ ಮತ್ತೆ 4.5 ಕೋಟಿ ಡೋಸ್ ನಷ್ಟು ಕೋವಿಶೀಲ್ಡ್ ಲಸಿಕೆ ಖರೀದಿಸಲು ಬದ್ಧವಾಗಿದ್ದೇವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ಸರ್ಕಾರ ಒಟ್ಟಾರೆ 6 ಕೋಟಿ ಡೋಸ್ ಲಸಿಕೆ ಖರೀದಿಸಲು ಸೀರಂ ಇನ್‌ಸ್ಟಿಟ್ಯೂಟ್‌ ಮತ್ತು ಭಾರತ್ ಬಯೋಟೆಕ್‌ಗೆ ಸೋಮವಾರ ಆದೇಶ ಹೊರಡಿಸಿದ್ದು, ಇದರ ಒಟ್ಟು ವೆಚ್ಚ ರೂ. 1.300 ಕೋಟಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.