ADVERTISEMENT

ಮನೆಯೊಳಗೆ ಗೋಹತ್ಯೆ: ಸಾರ್ವಜನಿಕ ಆದೇಶ ಉಲ್ಲಂಘನೆಯಲ್ಲ: ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ ಹೈಕೋರ್ಟ್ ತೀರ್ಪು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 20:19 IST
Last Updated 14 ಆಗಸ್ಟ್ 2021, 20:19 IST
ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್   

ಲಖನೌ:ಮನೆಯೊಳಗೆ ಗೋವಧೆ ಮಾಡುವುದನ್ನು ಸಾರ್ವಜನಿಕ ಆದೇಶದ ಉಲ್ಲಂಘನೆ ಎಂದು ಪರಿಗಣಿಸಲಾಗದು ಎಂದು ಅಲಹಾಬಾದ್ ಹೈಕೋರ್ಟ್‌ನ ಲಖನೌಪೀಠವುಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಸರೋಜ್ ಯಾದವ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಗೋಹತ್ಯೆ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಮೂವರನ್ನು ಬಂಧಿಸಿದ್ದ ಆದೇಶವನ್ನು ರದ್ದುಗೊಳಿಸಿ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಅರ್ಜಿದಾರರ ಮನೆಯಲ್ಲಿ ಬೆಳಗಿನ ಜಾವ ಗೋಮಾಂಸ ಕತ್ತರಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರು ಈ ಕೆಲಸಕ್ಕೆ ಮುಂದಾಗಬೇಕಾದರೆ ಅದಕ್ಕೆ ಬಡತನ, ನಿರುದ್ಯೋಗ ಅಥವಾ ಹಸಿವು ಕಾರಣವೇ ಎಂಬುದು ನಮಗೆ ಗೊತ್ತಿಲ್ಲ’ ಎಂದು ಕೋರ್ಟ್ ಹೇಳಿದೆ.

ADVERTISEMENT

‘ಆದರೆ, ಇದು ಕೂಡ, ಅರ್ಜಿದಾರರು ಮತ್ತು ಇತರ ಸಹ ಆರೋಪಿಗಳ ಈ ಕ್ರಮಕ್ಕೆ ಕಾರಣವಾಗಿರಬಹುದು’ ಎಂದು ಕೋರ್ಟ್ ಹೇಳಿದೆ.

‘ಈ ಕೃತ್ಯವನ್ನು ಸಾರ್ವಜನಿಕವಾಗಿ ಆಕ್ರಮಣಕಾರಿ ರೀತಿಯಲ್ಲಿ ಇತರ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ರೀತಿ ಮಾಡಲಾಗಿದೆಯೇ ಅಥವಾ ಮರೆಮಾಚುವ ರೀತಿ ಮಾಡಲಾಗಿದೆಯೇ ಎಂಬುದು ಇಲ್ಲಿನ ಪ್ರಶ್ನೆ. ಇದರ ಆಧಾರದ ಮೇಲೆ ಈ ಪ್ರಕರಣವು ಸಾರ್ವಜನಿಕ ಆದೇಶಕ್ಕೆ ಸಂಬಂಧಪಟ್ಟದ್ದೋ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದೆಯೇ ಎಂಬುದನ್ನು ನೋಡಬಹುದು’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಒಂದು ಘಟನೆಯಿಂದಲೇ,ಅರ್ಜಿದಾರರು ತಮ್ಮ ಕೃತ್ಯವನ್ನು ಪುನರಾವರ್ತಿಸುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ ಎಂದುಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, ಪೀಠ ಹೇಳಿತು.

‘ಆಪಾದಿತರು ತಮ್ಮ ಕೆಲಸವನ್ನು ಪುನರಾವರ್ತಿಸಬಹುದೆಂದು ಪೊಲೀಸರು ಊಹಿಸಬಹುದು. ಆದರೆ ಅಂತಹ ತೀರ್ಮಾನವನ್ನು ಸಮರ್ಥಿಸಲು ಕೆಲವು ವಸ್ತು ಮತ್ತು ಸನ್ನಿವೇಶಗಳನ್ನು ದಾಖಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದಾಗಿ ಪೀಠ ತಿಳಿಸಿತು.

ಕಳೆದ ವರ್ಷ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಿಸ್ವಾನ್ ಎಂಬಲ್ಲಿಮನೆಯೊಳಗೆ ಗೋಮಾಂಸ ಕತ್ತರಿಸುತ್ತಿರುವುದು ಪತ್ತೆಯಾದ ಕಾರಣ,ಪರ್ವೇಜ್, ಇರ್ಫಾನ್ ಮತ್ತು ರಹಮತ್‌ ಉಲ್ಲಾ ಎಂಬುವವರನ್ನು ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.