ADVERTISEMENT

CP Radhakrishnan: ದೇಶದ ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಆಯ್ಕೆ

ಪಿಟಿಐ
Published 9 ಸೆಪ್ಟೆಂಬರ್ 2025, 14:19 IST
Last Updated 9 ಸೆಪ್ಟೆಂಬರ್ 2025, 14:19 IST
<div class="paragraphs"><p>ಸಿ.ಪಿ ರಾಧಾಕೃಷ್ಣನ್</p></div>

ಸಿ.ಪಿ ರಾಧಾಕೃಷ್ಣನ್

   

ನವದೆಹಲಿ: ಜಗದೀಪ್‌ ಧನಕರ್‌ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್‌ ಅವರು ನಿರೀಕ್ಷೆಯಂತೆ ಗೆಲುವು ಸಾಧಿಸಿದರು. ಅವರು, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ ಅವರಿಗಿಂತ 152 ಹೆಚ್ಚುವರಿ ಮತಗಳನ್ನು ಪಡೆದು ದೇಶದ 15ನೇ ಉಪ ರಾಷ್ಟ್ರಪತಿಯಾಗಿ ಚುನಾಯಿತರಾದರು.

ಇಬ್ಬರೂ ಅಭ್ಯರ್ಥಿಗಳ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಎನ್‌ಡಿಎ ಮೈತ್ರಿಕೂಟದ ಬಳಿ ಬಹುಮತ ಇದ್ದ ಕಾರಣ ರಾಧಾಕೃಷ್ಣನ್‌ ಗೆಲುವು ಬಹುತೇಕ ಖಚಿತವಾಗಿತ್ತು.

ADVERTISEMENT

ರಾಧಾಕೃಷ್ಣನ್‌ ಅವರ ಪರವಾಗಿ ಒಟ್ಟು 452 ಮತಗಳು ಚಲಾವಣೆಯಾಗಿದ್ದರೆ, ಪ್ರತಿಸ್ಪರ್ಧಿ ಸುದರ್ಶನ ರೆಡ್ಡಿ ಅವರಿಗೆ 300 ಮತಗಳು ಬಂದಿವೆ ಎಂದು ಚುನಾವಣಾ ಅಧಿಕಾರಿ ಪಿ.ಸಿ. ಮೋದಿ ಅವರು ಪ್ರಕಟಿಸಿದರು.

‘ಒಟ್ಟು 767 ಸಂಸದರು (ಶೇ 98.2) ಮತಚಲಾಯಿಸಿದ್ದು, ಅವುಗಳಲ್ಲಿ 752 ಮತಗಳು ಮಾನ್ಯಗೊಂಡಿವೆ ಮತ್ತು 15 ಮತಗಳು ಅಮಾನ್ಯಗೊಂಡಿವೆ. ಅಂಚೆ ಮತಪತ್ರ ಸಲ್ಲಿಸಿದ್ದ ಸಂಸದರೊಬ್ಬರು ‘ಅದನ್ನು ಪರಿಗಣಿಸಬೇಡಿ’ ಎಂದು ಆನಂತರ ಹೇಳಿದ್ದರಿಂದ ಅದನ್ನು ಪರಿಗಣಿಸಿಲ್ಲ’ ಎಂದು ಅವರು ವಿವರಿಸಿದರು. 

‘ರಾಧಾಕೃಷ್ಣನ್‌ ಅವರು ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಚುನಾಯಿತರಾಗಿದ್ದಾರೆ ಎಂದು ನಾನು ಪ್ರಕಟಿಸುತ್ತಿದ್ದೇನೆ. ಈ ಫಲಿತಾಂಶವನ್ನು ಚುನಾವಣಾ ಆಯೋಗದ ಜತೆ ಹಂಚಿಕೊಳ್ಳುತ್ತೇನೆ’ ಎಂದು ಅವರು ಹೇಳಿದರು.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು. ಹೊಸ ಸಂಸತ್‌ ಭವನದಲ್ಲಿ ಸಂಸದರು ಸರಣಿಯಲ್ಲಿ ನಿಂತು ಮತಚಲಾಯಿಸಿದರು. ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ 96ರಷ್ಟು ಸದಸ್ಯರು ಮತದಾನ ಮಾಡಿದ್ದರು. 

ತಟಸ್ಥವಾಗಿ ಉಳಿದ ಬಿಜೆಡಿ, ಬಿಆರ್‌ಎಸ್‌...

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜು ಜನತಾದಳ (ಬಿಜೆಡಿ), ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಮತ್ತು ಶಿರೋಮಣಿ ಅಕಾಲಿದಳ ಪಕ್ಷಗಳ ಸದಸ್ಯರು ಮತ ಚಲಾವಣೆಯಿಂದ ದೂರ ಉಳಿದು, ತಟಸ್ಥ ನಿಲುವು ತಾಳಿದರು. ಸಂಸತ್ತಿನಲ್ಲಿ ಬಿಜೆಡಿ ಏಳು, ಬಿಆರ್‌ಎಸ್‌ ನಾಲ್ಕು, ಅಕಾಲಿದಳ ಒಬ್ಬ ಸದಸ್ಯರನ್ನು ಹೊಂದಿದೆ. 

ಬಿಜೆಡಿ, ಬಿಆರ್‌ಎಸ್‌, ಅಕಾಲಿದಳದ ಸದಸ್ಯರು ತಟಸ್ಥವಾಗಿ ಉಳಿಯುವ ಮೂಲಕ ಆಡಳಿತಾರೂಢ ಬಿಜೆಪಿಗೆ ಆಘಾತವಾಗುವಂತೆ ಮಾಡಿದ್ದಾರೆ ಎಂದು ಶಿವಾಸೇನಾ (ಯುಬಿಟಿ) ಸಂಸದ ಸಂಜಯ್‌ ರಾವುತ್‌ ವಾಗ್ದಾಳಿ ಮಾಡಿದ್ದಾರೆ.  

ಅಡ್ಡಮತದಾನದ ಲಾಭ ಬಿಜೆಪಿಗೆ:

‘ರಾಧಾಕೃಷ್ಣನ್‌ ಅವರ ಪರವಾಗಿ ಕೆಲ ಅಡ್ಡಮತದಾನ ನಡೆದಿರುವುದನ್ನು ಫಲಿತಾಂಶ ಸೂಚಿಸುತ್ತದೆ. ವಿರೋಧ ಪಕ್ಷಗಳ ಕನಿಷ್ಠ 15 ಸದಸ್ಯರು ಎನ್‌ಡಿಎ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ’ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ.

ಅದಕ್ಕೂ ಮುನ್ನ ಮಾತನಾಡಿದ್ದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಇವೆ. ಎಲ್ಲ 315 ಸಂಸದರು ಮತ ಚಲಾಯಿಸಿದ್ದಾರೆ’ ಎಂದು ಹೇಳಿದ್ದರು.  

‘ಪಿತೃಪಕ್ಷ’ದ ವೇಳೆ ಚುನಾವಣೆ: ಶಿವಸೇನಾ ಕಿಡಿ

ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಪಿತೃಪಕ್ಷದಲ್ಲಿ (ಅಶುಭ ಸಮಯ ಎಂದು ಪರಿಗಣಿಸಲಾಗುತ್ತದೆ) ನಡೆಸಿದ್ದಕ್ಕಾಗಿ ಶಿವಸೇನಾ (ಯುಬಿಟಿ) ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದೆ.

ರಾಧಾಕೃಷ್ಣನ್‌ ಅವರು ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ಮತ್ತು ಕಟ್ಟಾ ಹಿಂದುತ್ವವಾದಿ. ಆದರೆ ಅವರ ಆಯ್ಕೆಗೆ ನಿಗದಿಪಡಿಸಿದ ಸಮಯ ಆಶ್ಚರ್ಯ ಉಂಟು ಮಾಡಿದೆ ಎಂದು ಅದು ಟೀಕಿಸಿದೆ.

ಉಪರಾಷ್ಟ್ರಪತಿ ಆಗಿ ಆಯ್ಕೆಯಾದ ಸಿ.ಪಿ.ರಾಧಾಕೃಷ್ಣನ್‌ ಅವರಿಗೆ ಅಭಿನಂದನೆಗಳು. ಸಾರ್ವಜನಿಕ ಜೀವನದಲ್ಲಿನ ನಿಮ್ಮ ದಶಕಗಳ ಅನುಭವವು ದೇಶದ ಪ್ರಗತಿಗೆ ಮಹತ್ವದ ಕಾಣಿಕೆ ನೀಡಲು ನೆರವಾಗಲಿದೆ
ದ್ರೌಪದಿ ಮುರ್ಮು ರಾಷ್ಟ್ರಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.