ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ದೆಹಲಿಯಲ್ಲಿನ ಅಧಿಕೃತ ನಿವಾಸದಲ್ಲಿ ಸುಟ್ಟ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ವಾಗ್ದಂಡನೆಗೆ ನಿಲುವಳಿ ಮಂಡಿಸಲು ಬೆಂಬಲ ನೀಡುವಂತೆ ಸಿಪಿಐ ಸಂಸದ ಪಿ. ಸಂತೋಷ್ ಕುಮಾರ್ ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿದ್ದಾರೆ.
‘ವರ್ಮಾ ವಿರುದ್ಧದ ಆರೋಪಗಳು ಸಾಬೀತಾದರೆ ಅದು ಕೇವಲ ಜನರಿಗೆ ಎಸಗಿದ ನಂಬಿಕೆಗೆ ದ್ರೋಹ ಮಾತ್ರವಾಗಿರದೇ, ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅವಮಾನವೂ ಆಗಿರುತ್ತದೆ. ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಸಾರ್ಹತೆಯನ್ನು ಉಳಿಸಲು ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಮುಂದಾಗಬೇಕು’ ಎಂದು ಕುಮಾರ್ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ನ್ಯಾಯಾಂಗ ವ್ಯವಸ್ಥೆ ಮತ್ತು ಸಾರ್ವಜನಿಕರ ನಂಬಿಕೆ ಬಗ್ಗೆ ಪ್ರಶ್ನೆಗಳು ಉಂಟಾದಾಗ ಶಾಸಕಾಂಗವು ಮೌನವಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಪ್ರಕರಣದ ಬಳಿಕ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆಯಾಗಿರುವ ವರ್ಮಾ ಅವರು ಸ್ವಇಚ್ಛೆಯಿಂದ ರಾಜೀನಾಮೆ ನೀಡದಿದ್ದರೆ, ಸಂಸತ್ತಿನ ಮುಂದಿನ ಮುಂಗಾರು ಅಧಿವೇಶನದಲ್ಲಿ ವಾಗ್ದಂಡನೆ ನಿಲುವಳಿ ಮಂಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ ಎಂದು ಮೂಲಗಳು ತಿಳಿಸಿವೆ.
ವರ್ಮಾ ಅವರ ವಾಗ್ದಂಡನೆಗೆ ಶಿಫಾರಸು ಮಾಡಿ ಸುಪ್ರೀಂ ಕೋರ್ಟ್‌ನ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಪತ್ರ ಬರೆದಿದ್ದರು.
ವರ್ಮಾ ವಿರುದ್ಧ ಕ್ರಮಕ್ಕೆ ಯಾವುದೇ ಅಧಿಕೃತ ಪ್ರಕ್ರಿಯೆಗಳು ಆರಂಭಗೊಂಡಿಲ್ಲ. ಯಾವುದೇ ಕ್ರಮ ಕೈಗೊಳ್ಳುವ ಮೊದಲು ಸರ್ಕಾರವು ವಿಪಕ್ಷಗಳ ಬೆಂಬಲ ಪಡೆಯುವುದ ಅಗತ್ಯವಾಗಿರುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.