ADVERTISEMENT

ವಿ.ವಿ ನೇಮಕಾತಿ ತಡೆಹಿಡಿದ ರಾಜ್ಯಪಾಲರು: ಕಾಂಗ್ರೆಸ್‌ ಬೆಂಬಲ

ಕೇರಳ: ಸಹ ಪ್ರಾಧ್ಯಾಪಕರ ಹುದ್ದೆ ನೇಮಕಾತಿಯಲ್ಲಿ ಸ್ವಜನಪಕ್ಷಪಾತ ಆರೋಪ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 12:40 IST
Last Updated 18 ಆಗಸ್ಟ್ 2022, 12:40 IST

ತಿರುವನಂತಪುರ (ಪಿಟಿಐ): ಕಣ್ಣೂರು ವಿಶ್ವವಿದ್ಯಾಲಯದ ಮಲಯಾಳ ವಿಭಾಗದ ಸಹ ಪ್ರಾಧ್ಯಾಪಕಿಯಾಗಿ ಪ್ರಿಯಾ ವರ್ಗೀಸ್‌ ಅವರ ನೇಮಕಾತಿಯನ್ನು ‘ಸ್ವಜನಪಕ್ಷಪಾತದ’ ಆಧಾರದ ಮೇಲೆ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ಬುಧವಾರ ತಡೆಹಿಡಿದಿದ್ದು ರಾಜ್ಯಪಾಲರ ಈ ಕ್ರಮಕ್ಕೆ ವಿರೋಧ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಆಪ್ತ ಕಾರ್ಯದರ್ಶಿ ಕೆ.ಕೆ. ರಾಘೇಶ್‌ ಅವರ ಪತ್ನಿ ಪ್ರಿಯಾ ಅವರ ನೇಮಕಾತಿಯು ಕೇರಳ ರಾಜಕೀಯ ವಲಯದಲ್ಲಿ ವಿವಾದ ಎಬ್ಬಿಸಿತ್ತು. ಪ್ರಿಯಾ ಅವರು ಸಂಶೋಧನೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ. ಆದರೆ ಸಂದರ್ಶನದಲ್ಲಿ ಅಧಿಕ ಅಂಕ ಗಳಸಿದ್ದಾರೆ. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಪ್ರಥಮ ಸ್ಥಾನದಲ್ಲಿ ಇದ್ದರು. ಹೀಗಾಗಿ, ವಿ.ವಿಗಳ ಕುಲಾಧಿಪತಿಗಳೂ ಆದರಾಜ್ಯಪಾಲರು ತಮ್ಮ ವಿಶೇಷ ಅಧಿಕಾರ ಬಳಿಸಿ ಪ್ರಿಯಾ ಅವರ ನೇಮಕಾತಿಯನ್ನು ತಡೆಹಿಡಿದಿದ್ದಾರೆ.

ಪ್ರಿಯಾ ಅವರ ನೇಮಕಾತಿಗೆ ತಡೆಯೊಡ್ಡಿದ್ದನ್ನು ಸಮರ್ಥಿಸಿರುವ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸತೀಶನ್‌ ಅವರು, ಕಣ್ಣೂರು ವಿ.ವಿಯಿಂದ ನಡೆಯುತ್ತಿದ್ದ ಅಕ್ರಮ ನೇಮಕಾತಿಯನ್ನು ತಮ್ಮ ಅಧಿಕಾರ ಬಳಸಿ ರಾಜ್ಯಪಾಲರು ತಡೆದಿದ್ದಾರೆ. ರಾಜ್ಯದ ಇತರ ವಿ.ವಿಗಳಲ್ಲೂ ತಮ್ಮ ಸಂಬಂಧಿಗಳಿಗೆ ಉದ್ಯೋಗ ದೊರಕಿಸಲುಆಡಳಿತಾರೂಢ ಪಕ್ಷದ ನಾಯಕರು ಇದೇ ರೀತಿಯ ಅಕ್ರಮ ಎಸಗಿರಬಹುದು. ಹಾಗಾಗಿ, ರಾಜ್ಯದಾದ್ಯಂತ ಎಲ್ಲಾ ವಿ.ವಿಗಳಲ್ಲೂ ನೇಮಕಾತಿ ಕುರಿತು ತನಿಖೆ ನಡೆಸಲು ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ವಿಶ್ವವಿದ್ಯಾಲಯಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಇರಿಸುವ ನಿಟ್ಟಿನಲ್ಲಿ ವಿ.ವಿ ನೇಮಕಾತಿಗಳ ಜವಾಬ್ದಾರಿಯನ್ನು ಸಾರ್ವಜನಿಕ ಸೇವಾ ಆಯೋಗಕ್ಕೆ(ಪಿಎಸ್‌ಸಿ) ವಹಿಸಬೇಕು ಎಂದು ಸುಶೀಲನ್‌ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಇದೇ ವೇಳೆ, ರಾಜ್ಯಪಾಲರ ಕ್ರಮವನ್ನು ಆಡಳಿತಾರೂಢ ಸಿಪಿಎಂ ವಿರೋಧಿಸಿದೆ. ಈ ಕುರಿತು ಸಿಪಿಎಂನ ಮುಖವಾಣಿ ಪತ್ರಿಕೆಯಾದ ‘ದೇಶಾಭಿಮಾನಿ’ಯಲ್ಲಿ ಲೇಖನ ಬರೆದಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಅವರು, ‘ಕೇರಳದ ಎಡರಂಗದ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ. ಕೇಂದ್ರದ ಕಾರ್ಯಸೂಚಿಯಂತೆತಿದ್ದುಪಡಿಗಳಿಗೆ ಸಹಿ ಹಾಕಲು ರಾಜ್ಯಪಾಲರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಅವರು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.