ADVERTISEMENT

ಚುನಾವಣಾ ಬಾಂಡ್ ಮೂಲಕ ನಾವು ನಯಾಪೈಸೆ ಪಡೆದಿಲ್ಲ ಎಂದ ಸಿಪಿಐ(ಎಂ)

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)

ಏಜೆನ್ಸೀಸ್
Published 17 ಫೆಬ್ರುವರಿ 2024, 11:24 IST
Last Updated 17 ಫೆಬ್ರುವರಿ 2024, 11:24 IST
<div class="paragraphs"><p>ಸಿಪಿಐ(ಎಂ)</p></div>

ಸಿಪಿಐ(ಎಂ)

   

ಚಿತ್ರ ಕೃಪೆ–ಪಿಟಿಐ

ನವದೆಹಲಿ: ‘ಚುನಾವಣಾ ಬಾಂಡ್ ಮೂಲಕ ಯಾವುದೇ ಹಣವನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಡೆದಿಲ್ಲ. ಅದಕ್ಕಾಗಿಯೇ ಅಗತ್ಯವಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದಲ್ಲಿ ಖಾತೆಯನ್ನೂ ತೆರೆದಿಲ್ಲ’ ಎಂದು ಪಕ್ಷ ಹೇಳಿದೆ.

ADVERTISEMENT

ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಪಕ್ಷ, ‘ಕೆಲ ಮಾಧ್ಯಮಗಳಲ್ಲಿ ಚುನಾವಣಾ ಬಾಂಡ್ ಕುರಿತು ವರದಿಯಾಗಿದ್ದು, ಅದರಲ್ಲಿ ವಿವಿಧ ಮೂಲಗಳಿಂದ ಸಿಪಿಐ(ಎಂ) ಹಣ ಪಡೆದಿದೆ ಎಂದು ವರದಿಯಾಗಿದೆ. ಇದು ಸುಳ್ಳು ಮತ್ತು ಆದಾರರಹಿತವಾದದ್ದು. ನಿಜಾಂಶವೇನೆಂದರೆ ಸಿಪಿಐ(ಎಂ) ತನ್ನ ತಾತ್ವಿಕ ನೆಲೆಯಲ್ಲಿ ಚುನಾವಣಾ ಬಾಂಡ್‌ ವಿರೋಧಿಸಿದೆ. ಹೀಗಾಗಿ ಚುನಾವಣಾ ಬಾಂಡ್ ಸ್ವೀಕರಿಸಲು ಅಗತ್ಯವಿರುವ ಎಸ್‌ಬಿಐ ಖಾತೆಯನ್ನೂ ಪಕ್ಷ ತೆರೆದಿಲ್ಲ’ ಎಂದಿದೆ.

‘ಪಕ್ಷವು ಚುನಾವಣಾ ಬಾಂಡ್ ಅನ್ನೇ ವಿರೋಧಿಸಿದ್ದು, ಇದನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಧಾವೆ ಹೂಡಿದೆ’ ಎಂದೂ ಪತ್ರದಲ್ಲಿ ಹೇಳಲಾಗಿದೆ.

ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನಲ್ಲಿ, ಅನಾಮಧೇಯರಿಂದ ರಾಜಕೀಯ ನಿಧಿ ಪಡೆಯುವ ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನೇ ವಜಾಗೊಳಿಸಿದೆ. ಜತೆಗೆ ಇದು ‘ಅಸಾಂವಿಧಾನಿಕ’ ಎಂದೂ ಹೇಳಿದೆ. ಮಾರ್ಚ್ 13ರ ಒಳಗಾಗಿ ಬಾಂಡ್‌ ನೀಡಿದವರು, ಹಣ ಮತ್ತು ಪಡೆದವರ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

2018ರಲ್ಲಿ ಜಾರಿಗೆ ಬಂದ ಚುನಾವಣಾ ಬಾಂಡ್‌ ಜಾರಿಗೆ ಬಂದಿದ್ದು, ನಾಗರಿಕರು ಅಥವಾ ಯಾವುದೇ ಕಾರ್ಪೊರೇಟ್ ಸಮೂಹವು ಇದನ್ನು  ಬ್ಯಾಂಕ್‌ನಿಂದ ಖರೀದಿಸಬಹುದು. ನಂತರ ಅದನ್ನು ರಾಜಕೀಯ ಪಕ್ಷಗಳಿಗೆ ನೀಡಬಹುದು. ಆ ಪಕ್ಷಗಳು ಅದನ್ನು ಸುಲಭವಾಗಿ ನಗದೀಕರಿಸಬಹುದಾದ ವ್ಯವಸ್ಥೆ ಇದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.