ADVERTISEMENT

ಪಕ್ಷದ ವರ್ಚಸ್ಸು ವೃದ್ಧಿಗೆ ಮುಂದಾದ ಕೇರಳ ಸರ್ಕಾರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 12:07 IST
Last Updated 24 ಜುಲೈ 2020, 12:07 IST
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌   

ತಿರುವನಂತಪುರ:ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷದ ವರ್ಚಸ್ಸಿಗೆ ಉಂಟಾದ ಹಾನಿಯನ್ನು ಸರಿಪಡಿಸಿಕೊಳ್ಳಲು ಆಡಳಿತಾರೂಢ ಸಿಪಿಎಂಪಕ್ಷವು ಸಿದ್ಧತೆ ನಡೆಸುತ್ತಿದೆ.

ಈ ಸಂಬಂಧ,ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಗುರುವಾರ ಎಲ್ಲಾ ಇಲಾಖೆಗಳ ಆಪ್ತ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ‌ಸರ್ಕಾರ ಮುಂದಿನ ದಿನಗಳಲ್ಲಿ ತಳಮಟ್ಟದಿಂದಲೇ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ADVERTISEMENT

‘ಸರ್ಕಾರದ ಉತ್ತಮ ಯೋಜನೆಗಳ ಕುರಿತು ಆಗಸ್ಟ್‌ ತಿಂಗಳಿನಿಂದ ಮನೆ ಮನೆಗೆ ತೆರಳಿ ಅರಿವು ಮೂಡಿಸಬೇಕು. ಸರ್ಕಾರಕ್ಕೆ ಮುಜುಗರ ಆಗದಂತೆ ನಡೆದುಕೊಳ್ಳಬೇಕು. ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ನಡೆಸುತ್ತಿರುವ ಸುಳ್ಳು ಅಭಿಯಾನದ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು’ ಎಂದು ಬಾಲಕೃಷ್ಣನ್ ಸಭೆಯಲ್ಲಿ‌ ತಿಳಿಸಿದ್ದಾರೆ.

‘ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರದಿರುವ ಕುರಿತು ಗಂಭೀರ ಚರ್ಚೆ ಅಗತ್ಯವಿದೆ.ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುವ ಯಾವುದೇ ಮಾದರಿಯನ್ನು ವಿರೋಧಿಸಬೇಕು’ ಎಂದು ಡಿವೈಎಫ್‌ಐ ಕೇರಳ ಅಧ್ಯಕ್ಷ ಎಸ್.ಸತೀಶ್ ಹೇಳಿದ್ದಾರೆ.

ಕೋವಿಡ್–19, ನಿಫಾ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸಿದ್ದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೇರಳ ಸರ್ಕಾರಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಆದರೆ, ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿಯ ಕಚೇರಿಯ ಹೆಸರು ಕೇಳಿಬಂದಿರುವುದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.

ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಕಳ್ಳ ಸಾಗಾಣಿಕೆ ಜಾಲದ ಜತೆಗೆ ನಂಟು ಹೊಂದಿದ್ದಾರೆಂಬ ವಿಚಾರ ಕೇರಳ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ವಾಗ್ದಾಳಿ ನಡೆಸಿವೆ.

ಈ ರೀತಿಯ ಆರೋಪ ಸರ್ಕಾರಕ್ಕೆ ಅನಿರೀಕ್ಷಿತವಾಗಿತ್ತು. ಸರ್ಕಾರದ ನೇಮಕಾತಿಗಳಲ್ಲಿ ಹಿಂಬಾಗಿಲಿನಿಂದ ಬಂದವರಿಗೆ ಅವಕಾಶ ಮಾಡಿಕೊಟ್ಟಿರುವುದು, ಉದ್ಯೋಗದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಜನರಿಗೆ ಅಸಮಾಧಾನ ಮೂಡಿಸಿತ್ತು. ಇದರಿಂದ ಸರ್ಕಾರದ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಸರಿಪಡಿಸಲು ಸಿಪಿಎಂ ಪ್ರಯತ್ನ ನಡೆಸುತ್ತಿದೆ.

ಕೇರಳ ರಾಜ್ಯ ವಿಧಾನಸಭೆ ಚುನಾವಣೆಗೆ ಹತ್ತು ತಿಂಗಳಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಅಕ್ಟೋಬರ್ ವೇಳೆಗೆ ನಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.