ADVERTISEMENT

ಸಂಸತ್ತಿನ ಅಧಿವೇಶನ: ಪಕ್ಷದ ಕಾರ್ಯತಂತ್ರ ಅಂತಿಮಗೊಳಿಸಲು ಸಭೆ ಕರೆದ ಸೋನಿಯಾ

ಪಿಟಿಐ
Published 13 ಜುಲೈ 2025, 6:22 IST
Last Updated 13 ಜುಲೈ 2025, 6:22 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಪಕ್ಷದ ಕಾರ್ಯತಂತ್ರವನ್ನು ಅಂತಿಮಗೊಳಿಸಲು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮಂಗಳವಾರ ಪಕ್ಷದ ನಾಯಕರ ಸಭೆ ಕರೆದಿದ್ದಾರೆ. ಅಧಿವೇಶನವು ವಿರೋಧ ಪಕ್ಷಗಳು ಮತ್ತು ಸರ್ಕಾರದ ನಡುವೆ ಘರ್ಷಣೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಕೈಗೊಳ್ಳುವ ಚುನಾವಣಾ ಆಯೋಗದ ಕ್ರಮದ ಬಗ್ಗೆ ವಿರೋಧ ಪಕ್ಷಗಳು ಬಲವಾದ ಕಳವಳವನ್ನು ವ್ಯಕ್ತಪಡಿಸುವ ನಿರೀಕ್ಷೆಯಿದೆ.

ಅಲ್ಲದೆ, ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ ಮತ್ತು ಅದರ ನಂತರದ ರಾಜತಾಂತ್ರಿಕ ಸಂಪರ್ಕದ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ.

ADVERTISEMENT

ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಕುರಿತ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರರು ಭಾಗವಹಿಸುವ ನಿರೀಕ್ಷೆಯಿದೆ. ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 10, ಜನಪಥ ನಿವಾಸದಲ್ಲಿ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 21ರಂದು ಪ್ರಾರಂಭವಾಗಿ ಆಗಸ್ಟ್ 21ರವರೆಗೆ ನಡೆಯಲಿದೆ ಎಂದು ಸರ್ಕಾರ ಘೋಷಿಸಿತ್ತು. ಆದರೆ, ಈಗ ಅದನ್ನು ಒಂದು ವಾರ ವಿಸ್ತರಿಸಲಾಗಿದೆ.

ಪರಮಾಣು ಇಂಧನ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ಅನುವು ಮಾಡಿಕೊಡುವುದು ಸೇರಿದಂತೆ ಪ್ರಮುಖ ಕಾಯ್ದೆಗಳನ್ನು ಅಂಗೀಕರಿಸುವ ಸರ್ಕಾರದ ಯೋಜನೆಗಳ ಮಧ್ಯೆ ಅಧಿವೇಶನವನ್ನು ವಿನ್ತರಿಸಲಾಗಿದೆ.

ಬಜೆಟ್‌ನಲ್ಲಿ ಘೋಷಿಸಿದಂತೆ ಪರಮಾಣು ವಲಯದಲ್ಲಿ ಖಾಸಗಿಯವರಿಗೆ ಅನುವು ಮಾಡಿಕೊಡಲು ಪರಮಾಣು ನಾಗರಿಕ ಹೊಣೆಗಾರಿಕೆ ಕಾಯ್ದೆ ಮತ್ತು ಪರಮಾಣು ಇಂಧನ ಕಾಯ್ದೆಯನ್ನು ತಿದ್ದುಪಡಿ ಮಾಡಲು ಸರ್ಕಾರ ಯೋಜಿಸುತ್ತಿದೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ನಡೆಸಿದ ಆಪರೇಷನ್ ಸಿಂಧೂರ ಕುರಿತು ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಪರಮಾಣು ಯುದ್ಧವನ್ನು ತಪ್ಪಿಸಲು, ವ್ಯಾಪಾರದ ಉದ್ದೇಶವನ್ನು ಮುಂದಿಟ್ಟು ಭಾರತ-ಪಾಕಿಸ್ತಾನ ನಡುವೆ ಯುದ್ಧ ವಿರಾಮ ಘೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳ ಬಗ್ಗೆಯೂ ವಿರೋಧ ಪಕ್ಷಗಳು ಸರ್ಕಾರದಿಂದ ಉತ್ತರಗಳನ್ನು ಕೋರುತ್ತಿವೆ.

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ, ಟ್ರಂಪ್ ಅವರ ಜೊತೆಗಿನ ದೂರವಾಣಿ ಸಂಭಾಷಣೆಯಲ್ಲಿ ಅವರ ಹೇಳಿಕೆಗಳನ್ನು ತಿರಸ್ಕರಿಸಿದ್ದಾರೆ. ಭಾರತ ಎಂದಿಗೂ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿಲ್ಲ ಮತ್ತು ಭವಿಷ್ಯದಲ್ಲಿ ಅದನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.