ADVERTISEMENT

ಯುಪಿಯಲ್ಲಿ ದಲಿತ ಸೋದರಿಯರ ಅತ್ಯಾಚಾರ, ಕೊಲೆ: ಅಂತ್ಯಸಂಸ್ಕಾರಕ್ಕೆ ಒಪ್ಪದ ಪೋಷಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2022, 11:36 IST
Last Updated 15 ಸೆಪ್ಟೆಂಬರ್ 2022, 11:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರದಲ್ಲಿ ಇಬ್ಬರು ದಲಿತ ಸಹೋದರಿಯರ ಮೇಲೆ ಅತ್ಯಾಚಾರ ಮಾಡಿದ ನಂತರ ಮರಕ್ಕೆ ನೇಣು ಹಾಕಿರುವ ಘಟನೆ ನಡೆದಿದೆ. ಇದು ಲಖಿಂಪುರದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಯ ದೊರಕುವವರೆಗೂ ಬಾಲಕಿಯರ ಅಂತ್ಯಸಂಸ್ಕಾರ ಮಾಡಲು ಬಿಡುವುದಿಲ್ಲವೆಂದು ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಕನಿಷ್ಠ ₹ 1 ಕೋಟಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಪ್ರಕರಣದ ಸಂಬಂಧ ಈಗಾಗಲೇ ಆರು ಮಂದಿಯನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಛೋಟು ಗೌತಮ್, ಇಬ್ಬರು ಸೋದರಿಯರ ಪೈಕಿ ಒಬ್ಬಾಕೆಯನ್ನು ಮದುವೆಯಾಗಲು ಬಯಸಿದ್ದಾಗಿ ಹೇಳಿಕೊಂಡಿದ್ದಾನೆ.

ADVERTISEMENT

ಆದರೆ, ಆಕೆ ನಿರಾಕರಿಸಿದ ಮೇಲೆ ಸ್ನೇಹಿತರೊಂದಿಗೆ ಕೂಡಿ ಇಬ್ಬರೂ ಬಾಲಕಿಯರನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿ, ಕೊಲೆ ಮಾಡಿ ಮೃತದೇಹವನ್ನು ಮರಕ್ಕೆ ನೇತು ಹಾಕಿದ್ದಾರೆ ಎನ್ನಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿಸಂಜೀವ್ ಸುಮನ್ ಮಾತನಾಡಿ, ‘ಕೃತ್ಯಕ್ಕೂ ಮೊದಲು ಹುಡುಗಿಯರನ್ನು ತನ್ನ ಸ್ನೇಹಿತರಿಗೆ ತೋರಿಸಿದ್ದಾಗಿ ಪ್ರಮುಖ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಹೇಳಿದ್ದಾರೆ.

ಬುಧವಾರ ಮಧ್ಯಾಹ್ನ ಮನೆಯಿಂದ ಮೋಟಾರ್ ಬೈಕ್ ನಲ್ಲಿ ಬಾಲಕಿಯರನ್ನು ಅಪಹರಿಸಿದ್ದ ಆರೋಪಿಗಳನ್ನು ಸಂತ್ರಸ್ತ ಕುಟುಂಬಸ್ಥರು ಗುರುತಿಸಿದ್ದಾರೆ.

ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಐಪಿಸಿಯ ಕಠಿಣ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.