ADVERTISEMENT

HCಗಳಲ್ಲಿವೆ 7 ಲಕ್ಷ ಕ್ರಿಮಿನಲ್ ಪ್ರಕರಣಗಳು; ನ್ಯಾಯಮೂರ್ತಿಗಳ ನೇಮಕಕ್ಕೆ SC ಆಗ್ರಹ

ಪಿಟಿಐ
Published 8 ಮೇ 2025, 11:09 IST
Last Updated 8 ಮೇ 2025, 11:09 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಸುಮಾರು ಏಳು ಲಕ್ಷ ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ನೇಮಕಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರುಗಳನ್ನು ಕೇಂದ್ರ ಸರ್ಕಾರವು ತ್ವರಿತವಾಗಿ ಅಂತಿಮಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ನ್ಯಾ. ಅಭಯ್ ಎಸ್. ಒಕಾ ಮತ್ತು ನ್ಯಾ. ಉಜ್ಜಲ್‌ ಭುಯಾನ್ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ.

ADVERTISEMENT

ಅಲಹಾಬಾದ್ ನ್ಯಾಯಾಲಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪ್ರಕರಣಗಳು ಬಾಕಿ ಇವೆ. ಇಲ್ಲಿಗೆ 160 ನ್ಯಾಯಮೂರ್ತಿಗಳ ಮಂಜೂರಾತಿ ಇದ್ದು, ಸದ್ಯ 79 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಕೊಲಿಜಿಯಂ ಶಿಫಾರಸುಗಳನ್ನು ತ್ವರಿತವಾಗಿ ಅಂತಿಮಗೊಳಿಸುವ ಖಾತ್ರಿಯನ್ನು ಕೇಂದ್ರ ಸರ್ಕಾರ ನೀಡಬೇಕು. ಬಾಕಿ ಇರುವ ಶಿಫಾರಸುಗಳ ಪಟ್ಟಿಯನ್ನು ಕೇಂದ್ರ ಸರ್ಕಾರವು ಬೇಗನೆ ಅಂತಿಮಗೊಳಿಸಲಿದೆ ಎಂಬ ನಂಬಿಕೆ ಮತ್ತು ಭರವಸೆ ಇದೆ’ ಎಂದು ಪೀಠ ಹೇಳಿದೆ.

  • ಬಾಂಬೆ ಹೈಕೋರ್ಟ್‌ನಲ್ಲಿ ಮಂಜೂರಾದ ಹುದ್ದೆಗಳು 94; ಸದ್ಯ ಇರುವ ನ್ಯಾಯಮೂರ್ತಿಗಳ ಸಂಖ್ಯೆ 66

  • ಕಲ್ಕತ್ತ ಹೈಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 72; ಹಾಲಿ ಇರುವುದು 44

  • ದೆಹಲಿ ಹೈಕೋರ್ಟ್‌ಗೆ ಅಗತ್ಯ ಇರುವುದು 60 ನ್ಯಾಯಮೂರ್ತಿಗಳು; ಸದ್ಯ ಇರುವುದು 41 ಮಾತ್ರ

ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ನ್ಯಾಯಾಲಯದ ಅಂತರ್ಜಾಲ ಪುಟದಲ್ಲಿ ಪ್ರಕಟಿಸಲಾಗಿದೆ. ಇಂಥ ಹಲವು ಶಿಫಾರಸುಗಳು ಕೇಂದ್ರದ ಮುಂದಿದ್ದು, ಅವುಗಳು ಅಂತಿಮಗೊಳ್ಳಬೇಕಿದೆ.

2023ರಲ್ಲಿ ನಾಲ್ಕು ಶಿಫಾರಸುಗಳು, 2024ರಲ್ಲಿ 13 ಶಿಫಾರಸುಗಳು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಕಳುಹಿಸಿತ್ತು. ಆದರೆ ಈವರೆಗೂ ಅವು ಅಂತಿಮಗೊಂಡಿಲ್ಲ. 2024ರ ಸೆ. 24ರಂದು ಕಳುಹಿಸಿದ ಶಿಫಾರಸು ಕೂಡಾ ಕೇಂದ್ರದ ಮುಂದಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.