ADVERTISEMENT

ಯೋಗಿ ಸರ್ಕಾರಕ್ಕೆ ಪ್ರಿಯಾಂಕಾ ಟೀಕೆ

ಕ್ರಿಮಿನಲ್‌ಗಳು ರಾಜಾರೋಷವಾಗಿ ಓಡಾಡುತ್ತಾರೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 18:53 IST
Last Updated 29 ಜೂನ್ 2019, 18:53 IST
ಪ್ರಿಯಾಂಕಾ
ಪ್ರಿಯಾಂಕಾ   

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ‘ರಾಜ್ಯದಲ್ಲಿ ಕ್ರಿಮಿನಲ್‌ಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಿಯಾಂಕಾ ಅವರ ಆರೋಪಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿರುವ ಪೊಲೀಸರು, ‘ರಾಜ್ಯದಲ್ಲಿ ಎಲ್ಲಾ ರೀತಿಯ ಅಪರಾಧಗಳ ಪ್ರಮಾಣ ತಗ್ಗಿದೆ’ ಎಂದಿದ್ದಾರೆ. ‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕ್ರಿಮಿನಲ್‌ಗಳನ್ನು ಹತ್ತಿಕ್ಕಲಾಗಿದೆ’ ಎಂದುರಾಜ್ಯದ ಕಾನೂನು ಸಚಿವ ಬ್ರಿಜೇಶ್ ಪಾಠಕ್‌ ಸ್ಪಷ್ಟನೆ ನೀಡಿದ್ದಾರೆ.

ಟ್ವಿಟ್ಟರ್‌ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕಾ, ‘ರಾಜ್ಯದಲ್ಲಿ ಕ್ರಿಮಿನಲ್‌ಗಳು ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಮೌನವಾಗಿ ಕುಳಿತಿದೆ. ಉತ್ತರ ಪ್ರದೇಶ ಸರ್ಕಾರವು ಕ್ರಿಮಿನಲ್‌ಗಳಿಗೆ ಶರಣಾಗಿದೆಯೇ’ ಎಂದು ಪ್ರಶ್ನಿಸಿದ್ದರು.

ADVERTISEMENT

‌ಇದಕ್ಕೆ ಅಂಕಿ ಅಂಶಗಳ ಸಹಿತಿ ಪ್ರತಿಕ್ರಿಯಿಸಿದ ಪೊಲೀಸರು, ‘2 ವರ್ಷಗಳಲ್ಲಿ 9,925 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಎನ್‌ಎಸ್‌ಎ ಅನ್ವಯ ₹200 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಡಕಾಯಿತಿ, ಲೂಟಿ, ಕೊಲೆ, ಅಪಹರಣ ಇತ್ಯಾದಿ ಪ್ರಕರಣಗಳು ಗಣನೀಯವಾಗಿ ತಗ್ಗಿವೆ’ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗೆ ದನಿಗೂಡಿಸಿರುವ ಸಮಾಜವಾದಿ ಪಕ್ಷ, ‘ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿವೆ’ ಎಂದು ಆರೋಪಿಸಿದೆ.

‘ಉನ್ನಾವೊ ಜೈಲಿನಲ್ಲಿ ಕೈದಿಗಳು ನಾಡಪಿಸ್ತೂಲ್‌ ಪ್ರದರ್ಶಿಸಿದ್ದ ವಿಡಿಯೊ ಒಂದು ವೈರಲ್ ಆಗಿರುವುದನ್ನು ಉಲ್ಲೇಖಿಸಿದ ಎಸ್‌ಪಿ, ‘ಉನ್ನಾವೊ ಜೈಲು ಕೈದಿಗಳ ಹಿಡಿತದಲ್ಲಿರುವಂತೆ ಕಾಣಿಸುತ್ತಿದೆ. ಇಂಥ ಪ್ರಕರಣಗಳು ಮುಖ್ಯಮಂತ್ರಿಗೆ ಬಹಿರಂಗ ಸವಾಲು’ ಎಂದು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.