ಕಡಲ್ಲೂರುಪೊಲೀಸ್ ಎಕ್ಸ್ ಖಾತೆಯ ಚಿತ್ರ
ಕಡಲ್ಲೂರು: ಸಮೀಪದ ಸಿಪ್ಕಾಟ್ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಉತ್ಪಾದನಾ ಘಟಕದಿಂದ ವಿಷಕಾರಿ ಅನಿಲ ಸೋರಿಕೆಯಾಗಿದ್ದು, 40ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬೆಳಿಗ್ಗೆ ಅನಿಲ ಸೋರಿಕೆಯಾಗಿದ್ದು, ಸುತ್ತಮುತ್ತಲಿನ ನಿವಾಸಿಗಳು ಕಣ್ಣಿನ ಉರಿ ಮತ್ತು ಉಸಿರಾಟದ ತೊಂದರೆ ಬಗ್ಗೆ ಹೇಳಿಕೊಂಡಿದ್ದಾರೆ.
ರಾಸಾಯನಿಕ ಘಟಕದೊಳಗಿನ ಸ್ಟೀಮ್ ವಾಲ್ಟ್‌ನಿಂದ ಅನಿಲ ಸೋರಿಕೆ ಉಂಟಾಗಿರುವ ಬಗ್ಗೆ ಶಂಕಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಂತರ ಸೋರಿಕೆಯನ್ನು ನಿಯಂತ್ರಣಕ್ಕೆ ತರಲಾಗಿದೆ.
‘ಸುಮಾರು 43 ಜನರು ಕಣ್ಣಿನ ಉರಿ ಮತ್ತು ಉಸಿರುಗಟ್ಟುವಿಕೆಯಿಂದ ಬಳಲುತ್ತಿದ್ದರು. ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ’ಎಂದು ಅವರು ಹೇಳಿದರು.
ಕಡಲ್ಲೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಯಕುಮಾರ್ ಅವರು, ಕಂದಾಯ ಇಲಾಖೆ ಮತ್ತು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಕಾರ್ಖಾನೆಯನ್ನು ಪರಿಶೀಲಿಸಿದರು.
ಜಯಕುಮಾರ್ ಮತ್ತು ಅವರ ತಂಡವು ನಿವಾಸಿಗಳೊಂದಿಗೆ ಸಂವಹನ ನಡೆಸುತ್ತಿರುವ ಚಿತ್ರಗಳನ್ನು ಕಡಲ್ಲೂರು ಪೊಲೀಸರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
‘ಕಾರ್ಖಾನೆ ಅಧಿಕಾರಿಗಳಿಗೆ ವಿಷಾನಿಲ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿದ್ದೇನೆ. ಘಟನೆಯಿಂದ ಯಾವುದೇ ಸಾವುನೋವುಗಳು ಸಂಭವಿಸಿಲ್ಲ’ ಎಂದು ಜಯಕುಮಾರ್ ಪಿಟಿಐಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.