ADVERTISEMENT

ಸಿಯುಇಟಿ–ಯುಜಿ ಫಲಿತಾಂಶ ಪ್ರಕಟ: 19,800 ಅಭ್ಯರ್ಥಿಗಳಿಗೆ ಶೇ 100 ಅಂಕ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಸೆಪ್ಟೆಂಬರ್ 2022, 5:38 IST
Last Updated 16 ಸೆಪ್ಟೆಂಬರ್ 2022, 5:38 IST
ಸಿಯುಇಟಿ–ಯುಜಿ ಪರೀಕ್ಷೆಗಾಗಿ ಜುಲೈ 15ರಂದು ದೆಹಲಿಯ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದ ಅಭ್ಯರ್ಥಿಗಳು (ಪಿಟಿಐ)
ಸಿಯುಇಟಿ–ಯುಜಿ ಪರೀಕ್ಷೆಗಾಗಿ ಜುಲೈ 15ರಂದು ದೆಹಲಿಯ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದ ಅಭ್ಯರ್ಥಿಗಳು (ಪಿಟಿಐ)   

ನವದೆಹಲಿ: ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶುಕ್ರವಾರ ಬೆಳಗ್ಗೆ ಪ್ರಕಟಿಸಿದೆ. ಒಟ್ಟು 19,865 ಅಭ್ಯರ್ಥಿಗಳು 30 ವಿಷಯಗಳಲ್ಲಿ ಶೇಕಡ 100 ಅಂಕ ಗಳಿಸಿದ್ದಾರೆ.

ಅಭ್ಯರ್ಥಿಗಳು ಸಿಯುಇಟಿ–ಯುಜಿ ಅಧಿಕೃತ ವೆಬ್‌ಸೈಟ್ cuet.samarth.ac.in ನಿಂದ ಅಂಕ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ದೇಶದಾದ್ಯಂತ 91 ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಜುಲೈನಲ್ಲಿ ಪ್ರಾರಂಭವಾಗಿದ್ದ 6 ಹಂತಗಳ ಪರೀಕ್ಷೆ ಆಗಸ್ಟ್ 30 ರಂದು ಮುಕ್ತಾಯಗೊಂಡಿತ್ತು.

ADVERTISEMENT

ಪರೀಕ್ಷೆ ಫಲಿತಾಂಶ ಗುರುವಾರ ಮಧ್ಯಾಹ್ನವೇ ಪ್ರಕಟವಾಗಬೇಕಿತ್ತು. ಆದರೆ, ಭಾರಿ ಪ್ರಮಾಣದ ದತ್ತಾಂಶಗಳ ಕಾರಣಗಳಿಂದಾಗಿ ಪರೀಕ್ಷೆ ಫಲಿತಾಂಶ ವಿಳಂಬಗೊಂಡಿದೆ ಎಂದು ಎನ್‌ಟಿಎ ಹೇಳಿದೆ.

ಸಿಯುಇಟಿ–ಯುಜಿ ಫಲಿತಾಂಶದ ಆಧಾರದ ಮೇಲೆ, ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಮ್ಮ ಕಟ್-ಆಫ್ ಪಟ್ಟಿಯನ್ನು ಸಿದ್ಧಪಡಿಸುತ್ತವೆ. ಕಟ್-ಆಫ್ ಪಟ್ಟಿಯ ಆಧಾರದ ಮೇಲೆ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿದ್ದಾರೆ.

ಎಲ್ಲಾ ಆರು ಹಂತದ ಪರೀಕ್ಷೆಗಳಿಗೆ ಒಟ್ಟು 14.90 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಸುಮಾರು ಶೇ 60 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ.

ಭಾರತದಲ್ಲಿ 239 ನಗರಗಳ 444 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

ಭಾರತವನ್ನು ಹೊರತುಪಡಿಸಿ, ಮಸ್ಕತ್, ರಿಯಾದ್, ದುಬೈ, ಮನಾಮ, ದೋಹಾ, ಕಠ್ಮಂಡು, ಶಾರ್ಜಾ, ಸಿಂಗಾಪುರ್ ಮತ್ತು ಕುವೈತ್‌ನಲ್ಲಿಯೂ ಪರೀಕ್ಷೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.