ADVERTISEMENT

ಧರ್ಮಾತೀತ ದೇಶವಾಗಿ: ಪಾಕ್‌ಗೆ ರಾವತ್‌ ಸಲಹೆ

ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ರಾವತ್‌ ಸಲಹೆ

ಪಿಟಿಐ
Published 30 ನವೆಂಬರ್ 2018, 20:15 IST
Last Updated 30 ನವೆಂಬರ್ 2018, 20:15 IST
ಬಿಪಿನ್‌ ರಾವತ್‌
ಬಿಪಿನ್‌ ರಾವತ್‌   

ಪುಣೆ: ಪಾಕಿಸ್ತಾನವು ಇಸ್ಲಾಂ ದೇಶದಿಂದ ಧರ್ಮಾತೀತ ದೇಶವಾಗಿ ಬದಲಾಗಲಿ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್ ರಾವತ್‌ ಸಲಹೆ ನೀಡಿದ್ದಾರೆ.

ನೆರೆಯ ಭಾರತದ ಒಟ್ಟಿಗೇ ಸಾಗಲು ಆ ದೇಶ ಧರ್ಮಾತೀತವಾಗಿ ಬದಲಾಗಬೇಕಾದುದು ಅತೀ ಅಗತ್ಯ ಎಂದು ಅವರು, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ 135ನೇ ಬ್ಯಾಚ್‌ನ ನಿರ್ಗಮನ ಪಥಸಂಚಲನದ ಸಂದರ್ಭದಲ್ಲಿ ಶುಕ್ರವಾರ ಹೇಳಿದರು.

‘ನಮ್ಮದು ಧರ್ಮಾತೀತ ರಾಷ್ಟ್ರ. ಆದರೆ ಪಾಕಿಸ್ತಾನವು ನಮ್ಮದು ಇಸ್ಲಾಂ ರಾಷ್ಟ್ರ, ಉಳಿದವರು ಯಾರಿಗೂ ಇಲ್ಲಿ ಯಾವುದೇ ಪಾತ್ರ ಇಲ್ಲ ಎಂದು ಹೇಳುವುದಾದರೆ, ನಾವು ಹೇಗೆ ತಾನೇ ಒಟ್ಟಿಗೆ ಸಾಗಲು ಸಾಧ್ಯ? ಆದರೆ ನಮ್ಮಂತೆ ಧರ್ಮಾತೀತ ಆಗಲು ಬಯಸಿದರೆ ಆಗ ಅವರಿಗೆ ಅವಕಾಶ ಸಿಗಬಹುದು. ಅವರು ಹಾಗೆ ಬದಲಾಗುತ್ತಾರೋ ಇಲ್ಲವೋ ಕಾದು ನೋಡೋಣ’ ಎಂದು ಹೇಳಿದರು.

ADVERTISEMENT

ಭಯೋತ್ಪಾದನೆ ಹತ್ತಿಕ್ಕಲಿ: ಮಾತುಕತೆಗೆ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ಪಾಕಿಸ್ತಾನ ಎರಡು ಹೆಜ್ಜೆ ಇಡುತ್ತದೆ ಎಂಬ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾವತ್‌, ಆ ದೇಶ ತನ್ನ ನೆಲದಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯಗಳನ್ನು ಹತ್ತಿಕ್ಕುವ ಮೂಲಕ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಿ. ಈ ಹಿಂದೆ ಭಾರತ ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಿಮ್ಮ ದೇಶದಲ್ಲಿ ಭಯೋತ್ಪಾದನೆ ನೆಲೆ ಕಂಡುಕೊಂಡಿದೆ ಎಂದು ನಾವು ಹೇಳಿದರೆ, ನಮ್ಮ ವಿರುದ್ಧ ನಡೆಯುವ ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಕೆಲವು ಕ್ರಮಗಳನ್ನಾದರೂ ಅದು ಕೈಗೊಳ್ಳಬೇಕು ಎಂದು ಹೇಳಿದರು.

ಜರ್ಮನಿ ಮತ್ತು ಫ್ರಾನ್ಸ್‌ ಉತ್ತಮ ನೆರೆಹೊರೆಯವರಾಗಿರುವಾಗ, ಭಾರತ– ಪಾಕಿಸ್ತಾನ ಹಾಗೆ ಆಗಬಾರದೇಕೆ ಎಂಬ ಇಮ್ರಾನ್‌ ಹೇಳಿಕೆಗೆ, ನೆರೆಯ ರಾಷ್ಟ್ರ ತನ್ನ ಆಂತರಿಕ ಸ್ಥಿತಿಯ ಬಗ್ಗೆ ಮೊದಲು ಗಮನಹರಿಸಲಿ ಎಂದರು.

ಯುದ್ಧರಂಗಕ್ಕೆ ಮಹಿಳೆ: ಸನ್ನದ್ಧವಾಗದ ಸೇನೆ
ಯುದ್ಧರಂಗದಲ್ಲಿ ಮಹಿಳೆಯರನ್ನು ಒಳಗೊಳ್ಳಲು ಸೇನೆ ಇನ್ನೂ ಸಿದ್ಧವಾಗಿಲ್ಲ ಎಂದು ರಾವತ್‌ ಹೇಳಿದರು.

‘ಅದಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಇನ್ನಷ್ಟೇ ಸೃಷ್ಟಿಸಬೇಕಾಗಿದೆ. ಮಹಿಳೆಯರು ಸಹ ಅಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಬೇಕಾಗಿದೆ. ಏಕೆಂದರೆ ಈ ವಿಷಯ ಅಷ್ಟೊಂದು ಸರಳವಲ್ಲ. ಹೆಚ್ಚು ಮುಕ್ತವಾಗಿರುವ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ನಾವು ಹೋಲಿಕೆ ಮಾಡಿಕೊಳ್ಳುವುದು ಸಲ್ಲದು’ ಎಂದರು.

ನಮ್ಮ ದೊಡ್ಡ ನಗರಗಳಲ್ಲಿ ನಾವು ಹೆಚ್ಚು ಮುಕ್ತರಾಗಿ ಇರಬಹುದು. ಆದರೆ, ಸೇನಾ ಸಿಬ್ಬಂದಿ ದೊಡ್ಡ ನಗರಗಳಿಗೆ ಸೇರಿದವರಷ್ಟೇ ಆಗಿರುವುದಿಲ್ಲ. ಪರಸ್ಪರ ಬೆರೆಯುವ ವಾತಾವರಣ ಇನ್ನೂ ಇಲ್ಲದ ಗ್ರಾಮೀಣ ಪ್ರದೇಶಗಳಿಂದಲೂ ಬಂದಿರುತ್ತಾರೆ ಎಂದರು. ಸೇನಾ ವ್ಯವಹಾರ ನಿರ್ವಹಣೆ ಮಹತ್ವ ಪಡೆಯುತ್ತಿರುವ ಈ ಕಾಲಘಟ್ಟದಲ್ಲಿ ನಮಗೆ ದುಭಾಷಿಗಳ ಅಗತ್ಯವಿದೆ ಈ ಕಾರ್ಯಕ್ಕೆ ಮಹಿಳೆಯರನ್ನು ನೇಮಿಸಿಕೊಳ್ಳುವ ಇರಾದೆ ಇದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.