ಸುಪ್ರೀಂಕೋರ್ಟ್ (ಪಿಟಿಐ ಸಂಗ್ರಹ ಚಿತ್ರ)
ನವದೆಹಲಿ: ಕಸ್ಟಡಿ ಸಾವು ಪ್ರಕರಣದ ಅರೋಪಿಗಳಾಗಿ ತಲೆಮರೆಸಿಕೊಂಡಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಮಧ್ಯಪ್ರದೇಶ ಸರ್ಕಾರ ಮತ್ತು ಸಿಬಿಐಯನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದೆ.
ಆರೋಪಿ ಪೊಲೀಸ್ ಅಧಿಕಾರಿಗಳು ಏಪ್ರಿಲ್‌ನಿಂದ ತಲೆಮರೆಸಿಕೊಂಡಿದ್ದಾರೆ. ಆದರೂ ಅವರನ್ನು ಅಮಾನತು ಮಾಡಲಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು ಹೇಳಿದೆ. ಸ್ಥಳೀಯ ಪೊಲೀಸರು ಸಾವಿನ ತನಿಖೆಯಲ್ಲಿ ಪ್ರಭಾವ ಬೀರುವ ಜೊತೆಗೆ, ಪ್ರಕರಣವನ್ನು ಮುಚ್ಚಿಡಲು ಪ್ರಯತ್ನಿಸಿದರು ಎಂದು ಪೀಠ ಹೇಳಿದೆ.
ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ 24 ವರ್ಷದ ಸಂತ್ರಸ್ತ ವ್ಯಕ್ತಿಯ ತಾಯಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಪ್ರಕರಣವನ್ನು ಮಧ್ಯಪ್ರದೇಶ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವಂತೆ ಮೇ 15ಕ್ಕೆ ಆದೇಶ ನೀಡಲಾಗಿದ್ದರೂ, ಅದನ್ನು ಪಾಲಿಸದೆ ನ್ಯಾಯಾಂಗ ನಿಂದನೆ ಕೃತ್ಯ ಎಸಗಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ಹಾಜರಾದ ಸಿಬಿಐ ಪರ ವಕೀಲರು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಬುಧವಾರ ಅಮಾನತುಗೊಳಿಸಲಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ‘ಅವರು ಏಪ್ರಿಲ್‌ನಿಂದ ತಲೆಮರೆಸಿಕೊಂಡಿದ್ದಾರೆ ಎಂದು ನೀವು ಹೇಳಿದ್ದೀರಿ. ಆದರೆ ಬುಧವಾರ ಅಮಾನತು ಮಾಡಿದ್ದೀರಿ. ಇದರ ಅರ್ಥ ನೀವು ಅವರನ್ನು ರಕ್ಷಣೆ ಮಾಡುತ್ತಿದ್ದೀರಿ. ಇದು ನಿಜವಾಗಿಯೂ ನ್ಯಾಯಾಂಗ ನಿಂದನೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.