
ನವದೆಹಲಿ: ‘ದಿತ್ವಾ’ ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
‘ಶ್ರೀಲಂಕಾ ಅಧ್ಯಕ್ಷ ದಿಸ್ಸನಾಯಕೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ದಿತ್ವಾ ಚಂಡಮಾರುತದಿಂದ ಉಂಟಾದ ಜೀವಹಾನಿ ಮತ್ತು ವ್ಯಾಪಕ ವಿನಾಶ ಕುರಿತು ಸಂತಾಪ ಸೂಚಿಸಿದ್ದೇನೆ. ಆಪ್ತ ಮತ್ತು ವಿಶ್ವಾಸಾರ್ಹ ಸ್ನೇಹಿತನಾಗಿ ಈ ಕಷ್ಟದ ಸಮಯದಲ್ಲಿ ಭಾರತವು ಶ್ರೀಲಂಕಾ ಮತ್ತು ಅಲ್ಲಿನ ಜನರ ಬೆಂಬಲಕ್ಕೆ ದೃಢವಾಗಿ ನಿಂತಿದೆ’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ‘ಆಪರೇಷನ್ ಸಾಗರ್ ಬಂಧು’ ಅಡಿಯಲ್ಲಿ ಭಾರತವು ಅಗತ್ಯವಿರುವ ಎಲ್ಲಾ ನೆರವು ಒದಗಿಸುತ್ತಿದೆ. ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಲು ಶ್ರೀಲಂಕಾದೊಂದಿಗೆ ಭಾರತ ಕೈಜೋಡಿಸಲಿದೆ’ ಎಂದೂ ಮೋದಿ ತಿಳಿಸಿದ್ದಾರೆ.
‘ದಿತ್ವಾ’ ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ, ಭಾರಿ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 593ಕ್ಕೆ ಏರಿಕೆಯಾಗಿದೆ. ಅಲ್ಲದೆ 468 ಮಂದಿ ಕಾಣೆಯಾಗಿದ್ದಾರೆ.
ಚಂಡಮಾರುತದಿಂದ ಸುಮಾರು 5 ಲಕ್ಷದ 78 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ ನೆರವು ನೀಡಲು ಭಾರತೀಯ ವಾಯುಪಡೆ ಈವರೆಗೆ 53 ಟನ್ ಪರಿಹಾರ ಸಾಮಗ್ರಿಗಳು, 80ಕ್ಕೂ ಹೆಚ್ಚು ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು 12 ಟನ್ ಉಪಕರಣಗಳನ್ನು ರವಾನಿಸಿದೆ. ಪಡಿತರ ಮತ್ತು ಇತರ ಅಗತ್ಯ ವಸ್ತುಗಳು ಇದರಲ್ಲಿ ಸೇರಿವೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.