
(ಚಿತ್ರ ಕೃಪೆ: X/@Indiametdept)
ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಡಿಶಾದಲ್ಲಿ 'ಮೊಂಥಾ' ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ.
ದಕ್ಷಿಣ ಒಡಿಶಾದ ಎಂಟು ಜಿಲ್ಲೆಗಳಲ್ಲಿ 128 ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ.
ಸಂಭವನೀಯ ಪ್ರಾಕೃತಿಕ ವಿಕೋಪವನ್ನು ಎದುರಿಸಲು ರಾಜ್ಯ ಸರ್ಕಾರವು ಸಜ್ಜಾಗಿದೆ. ಇಂದು (ಸೋಮವಾರ) ಸಂಜೆಯೊಳಗೆ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಒಡಿಶಾದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ತಿಳಿಸಿದ್ದಾರೆ.
ಆಂಧ್ರಪ್ರದೇಶದ ಕರಾವಳಿ ಮೂಲಕ ಒಡಿಶಾದ ದಕ್ಷಿಣ ಹಾಗೂ ಕರಾವಳಿ ಪ್ರದೇಶಗಳ ಮೇಲೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.
ಮಾಲ್‌ಕಾನ್‌ಗಿರಿ, ಕೊರಾಪುಟ್, ನಬ್‌ರಂಗ್‌ಪುರ, ರಾಯಗಢ, ಗಜ್‌ಪತಿ, ಗಂಜಾಂ, ಕಂಧಮಾಲ್ ಮತ್ತು ಕಲಾಹಂಡಿ ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದೆ. ಗಂಟೆಗೆ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಪಡೆ (ಒಡಿಆರ್‌ಎಎಫ್), ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳವನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.
ಅಕ್ಟೋಬರ್ 28 ಹಾಗೂ 29ರಂದು ಗಾಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.