ADVERTISEMENT

ಜಾರ್ಖಂಡ್‌ ಪ್ರವೇಶಿಸಿದ ಯಸ್‌ ಚಂಡಮಾರುತ: 8 ಲಕ್ಷ ಜನರ ಬದುಕಿನ ಮೇಲೆ ಪರಿಣಾಮ

ಪಿಟಿಐ
Published 27 ಮೇ 2021, 3:14 IST
Last Updated 27 ಮೇ 2021, 3:14 IST
ಒಡಿಶಾದಲ್ಲಿ ಚಂಡಮಾರುತದಿಂದ ಹಾನಿಯಾಗಿರುವ ಪ್ರದೇಶಗಳಲ್ಲಿ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ
ಒಡಿಶಾದಲ್ಲಿ ಚಂಡಮಾರುತದಿಂದ ಹಾನಿಯಾಗಿರುವ ಪ್ರದೇಶಗಳಲ್ಲಿ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ   

ರಾಂಚಿ: ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ ಸುರಿಸಿರುವ ಯಸ್‌ ಚಂಡಮಾರುತವು ಜಾರ್ಖಂಡ್‌ ಪ್ರವೇಶಿಸಿದೆ. ಚಂಡಮಾರುತದಿಂದ ಆಗುವ ಹಾನಿಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಾರ್ಖಂಡ್‌ ತೀವ್ರ ಕಟ್ಟೆಚ್ಚರ ವಹಿಸಿದ್ದು, ಸುಮಾರು 12,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಯಸ್‌ ಚಂಡಮಾರುತದಿಂದ 8 ಲಕ್ಷ ಜನರ ಜೀವನದ ಮೇಲೆ ಪರಿಣಾಮ ಉಂಟಾಗಿದ್ದು, ಜನರು ಹೊರಗೆ ಓಡಾಡುವುದನ್ನು ತಪ್ಪಿಸಲು ರಾಜ್ಯದ ಕೆಲವು ಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡಲಾಗಿದೆ.

ಬುಧವಾರ ಗಂಟೆಗೆ 130ರಿಂದ 145 ಕಿ.ಮೀ. ವೇಗದ ಗಾಳಿಯೊಂದಿಗೆ ಪೂರ್ವ ಕರಾವಳಿಗೆ ಅಪ್ಪಳಿಸಿದ ‘ಯಸ್‌’ ಚಂಡಮಾರುತವು, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಪಾರ ಹಾನಿಗೆ ಕಾರಣವಾಗಿದೆ. ಎರಡೂ ರಾಜ್ಯಗಳಲ್ಲಿ ಭಾರಿ ಮಳೆ ಸುರಿದಿದೆ. ಮನೆಗಳು ಮತ್ತು ಹೊಲಗಳು ಹಾನಿಗೀಡಾಗಿವೆ. ಒಡಿಶಾದಲ್ಲಿ ಮೂವರು ಮತ್ತು ಬಂಗಾಳದಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.

ADVERTISEMENT

ಸಿಂಡೆಗಾ, ಪೂರ್ವ ಮತ್ತು ಪಶ್ಚಿಮ ಸಿಂಹಭೂಮ, ಸರಾಯ್‌ಕೆಲಾ–ಖರಸಾವಾ ಜಿಲ್ಲೆಗಳಲ್ಲಿ ಕನಿಷ್ಠ ಎಂಟು ಲಕ್ಷ ಜನರ ಬದುಕಿನ ಮೇಲೆ ಚಂಡಮಾರುತ ಪರಿಣಾಮ ಉಂಟು ಮಾಡಿದೆ. ಈ ಪ್ರದೇಶಗಳಲ್ಲಿ ಗಂಟೆಗೆ 92-117 ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ಪೂರ್ವ ಮತ್ತು ಪಶ್ಚಿಮ ಸಿಂಹಭೂಮ ಪ್ರದೇಶ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ಅಮಿತಾಭ್ ಕೌಶಾಲ್ ತಿಳಿಸಿದ್ದಾರೆ.

'ಒಟ್ಟು 848 ಹಳ್ಳಿಗಳ ಮೇಲೆ ಚಂಡಮಾರುತದ ಪರಿಣಾಮವಾಗಿದ್ದು, 310 ಆಶ್ರಯ ಕೇಂದ್ರಗಳಿಗೆ 10,767 ಜನರನ್ನು ಸ್ಥಳಾಂತರಿಸಿದ್ದೇವೆ. ಬಿರುಸಾದ ಗಾಳಿ ಬೀಸುತ್ತಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದ್ದು, ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡಲಾಗಿದೆ' ಎಂದು ಪೂರ್ವ ಸಿಂಹಭೂಮದ ಜಿಲ್ಲಾಧಿಕಾರಿ ಸೂರಜ್ ಕುಮಾರ್ ಹೇಳಿದ್ದಾರೆ.

ರಕ್ಷಣಾ ಕಾರ್ಯಗಳಿಗೆ ಸಜ್ಜಾಗಿರುವಂತೆ ಎನ್‌ಡಿಆರ್‌ಎಫ್‌ ತಂಡಗಳಿಗೆ ತಿಳಿಸಲಾಗಿದೆ. ಅದಾಗಲೇ 500 ವಿಪತ್ತು ನಿರ್ವಹಣಾ ತಂಡಗಳು ಕಾರ್ಯಾಚರಿಸುತ್ತಿವೆ. ರಾಜ್ಯದ ಹಲವು ಭಾಗಗಳಲ್ಲಿ ಕೋವಿಡ್‌–19 ಪರೀಕ್ಷೆಗಳು, ಕೋವಿಡ್‌ ಲಸಿಕೆ ಕಾರ್ಯಕ್ರಮಗಳನ್ನು ಗುರುವಾರದವರೆಗೂ ಸ್ಥಗಿತಗೊಳಿಸಲಾಗಿದೆ.

ನಕ್ಸಲ್‌ಪೀಡಿತ ಪ್ರದೇಶ ಪೊಲೀಸ್ ಠಾಣೆಗಳಿಗೆ ಸಂವಹನಕ್ಕಾಗಿ ಸ್ಯಾಟಲೈಟ್ ಫೋನ್‌ಗಳನ್ನು ಒದಗಿಸಲಾಗಿದೆ ಎಂದು ಡಿಜಿಪಿ ನೀರಜ್ ಸಿನ್ಹಾ ತಿಳಿಸಿದ್ದಾರೆ.

'ರಾಜ್ಯ ಸರ್ಕಾರ, ಜಿಲ್ಲಾಡಳಿತ, ಎನ್‌ಡಿಆರ್‌ಎಫ್‌ ತಂಡಗಳು ಕಟ್ಟೆಚ್ಚರವಹಿಸಿವೆ. ಜನರು ಮನೆಯಲ್ಲಿಯೇ ಇರಿ' ಎಂದು ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಮನವಿ ಮಾಡಿದ್ದಾರೆ.

ಒಂದು ವಾರದಲ್ಲಿ ಭಾರತಕ್ಕೆ ಅಪ್ಪಳಿಸಿದ ಎರಡನೇ ಚಂಡಮಾರುತ ಇದು. ತೌತೆ ಚಂಡಮಾರುತವು ಪಶ್ಚಿಮ ಕರಾವಳಿಗೆ ಕಳೆದ ವಾರ ಅಪ್ಪಳಿಸಿತ್ತು. ಮಹಾರಾಷ್ಟ್ರ, ಗುಜರಾತ್‌ ಸೇರಿ ಐದು ರಾಜ್ಯಗಳಲ್ಲಿ ಭಾರಿ ನಾಶಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.