ADVERTISEMENT

ದಾಭೋಲ್ಕರ್‌ ಹತ್ಯೆ: ಹಂತಕನಿಗೆ ಕರ್ನಾಟಕ, ಮಹಾರಾಷ್ಟ್ರದಲ್ಲಿ ತರಬೇತಿ

ಕೋರ್ಟ್‌ಗೆ ಮಾಹಿತಿ ಸಲ್ಲಿಸಿದ ಸಿಬಿಐ

ಪಿಟಿಐ
Published 19 ಆಗಸ್ಟ್ 2018, 16:12 IST
Last Updated 19 ಆಗಸ್ಟ್ 2018, 16:12 IST
ನರೇಂದ್ರ ದಾಭೋಲ್ಕರ್
ನರೇಂದ್ರ ದಾಭೋಲ್ಕರ್   

ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧಿಸಿರುವ ಪ್ರಮುಖ ಹಂತಕ ಸಚಿನ್ ಪ್ರಕಾಶ್‌ರಾವ್ ಅಂದುರೆ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಬಂದೂಕು ತರಬೇತಿ ಪಡೆದಿದ್ದಾನೆ ಎಂದು ಸಿಬಿಐ ಭಾನುವಾರ ಕೋರ್ಟ್‌ಗೆ ತಿಳಿಸಿದೆ.

ತನಿಖಾಧಿಖಾರಿಗಳು ಆರೋಪಿಯನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ದು, ಶಿವಾಜಿನಗರದಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಎ.ಎಸ್‌.ಮುಜುಮ್‌ದಾರ್‌ ಅವರ ಎದುರು ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿಯನ್ನು ಆಗಸ್ಟ್‌ 26ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದರು. ಅಂದುರೆಯನ್ನು ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ ಶುಕ್ರವಾರ ಸಿಬಿಐ ಬಂಧಿಸಿತ್ತು.

ಈಗಾಗಲೇ ಬಂಧಿಸಿರುವ ಮತ್ತೊಬ್ಬ ಆರೋಪಿ ತಾವಡೆ, ದಾಭೋಲ್ಕರ್‌ ಹತ್ಯೆಯ ಪ್ರಮುಖ ಸಂಚುಕೋರ ಎಂದು ಸಿಬಿಐ ಹೇಳಿದೆ.

ADVERTISEMENT

2013ರ ಆ.20ರಂದು ಓಂಕಾರೇಶ್ವರ ಸೇತುವೆ ಬಳಿ ವಾಯುವಿಹಾರ ಮಾಡುತ್ತಿದ್ದ ದಾಭೋಲ್ಕರ್ ಅವರನ್ನು ಬೈಕ್‌ನಲ್ಲಿ ಬಂದು ಇಬ್ಬರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಇಬ್ಬರು ಹಂತಕರಲ್ಲಿ ಅಂದುರೆ ಕೂಡ ಒಬ್ಬ. ಕೃತ್ಯಕ್ಕೆ ಬಳಸಿದ ರಿವಾಲ್ವರ್‌ ಮತ್ತು ವಾಹನ ವಶಪಡಿಸಿಕೊಳ್ಳಬೇಕು ಎಂದು ಸಿಬಿಐ ನ್ಯಾಯಾಲಯಕ್ಕೆ ಹೇಳಿಕೆ ನೀಡಿದೆ.

ಹಂತಕ ಅಂದುರೆ, ದಾಭೋಲ್ಕರ್‌ ಹತ್ಯೆ ಮಾಡುವ ಮುನ್ನ, ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಬಂದೂಕು ತರಬೇತಿ ಪಡೆದಿದ್ದಾನೆ. ಹಂತಕರಿಗೆ ಯಾವ ಸ್ಥಳದಲ್ಲಿ, ಯಾರು ತರಬೇತಿ ನೀಡಿದರು ಮತ್ತು ಇವರಿಗೆ ಯಾರು ರಿವಾಲ್ವರ್‌ ಒದಗಿಸಿದರು ಎನ್ನುವುದನ್ನು ಪತ್ತೆ ಹಚ್ಚಬೇಕಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆ ಅಗತ್ಯವಿದ್ದು, ಆರೋಪಿಯನ್ನು 14 ದಿನಗಳ ಕಾಲ ತನಿಖಾಧಿಕಾರಿಗಳ ವಶಕ್ಕೆ ನೀಡುವಂತೆ ಸಿಬಿಐ ಪರ ವಕೀಲ ವಿಜಯ್‌ಕುಮಾರ್‌ ಧಕನೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿವಾದಿ ವಕೀಲ ಪ್ರಕಾಶ್‌ ಸಾಲ್ಸಿಂಗಿಕರ್‌, ಕೋರ್ಟ್‌ಗೆ ಸಿಬಿಐ ಸಲ್ಲಿಸಿರುವ ಚಾರ್ಚ್‌ಶೀಟ್‌ನಲ್ಲಿ ದಾಭೋಲ್ಕರ್‌ ಹತ್ಯೆಯ ಹಂತಕರು ಸಾರಂಗ್‌ ಅಕೋಲ್ಕರ್‌ ಮತ್ತು ವಿನಯ್‌ ಪವಾರ್‌ ಎಂದು ಹೆಸರಿಸಿದೆ. ತಾವಡೆಯ ಬಂಧನದ ನಂತರ ಅಂದುರೆಯನ್ನೂ ಬಂಧಿಸಿ, ಇವರೇ ಪ್ರಮುಖ ಹಂತಕರೆಂದು ಬಿಂಬಿಸುತ್ತಿದೆ ಎಂದರು.

ಏಳರಿಂದ ಎಂಟು ಸಾಕ್ಷಿಗಳು ನೀಡಿದ ಮಾಹಿತಿ ಆಧರಿಸಿ ಸಿಬಿಐ ಆರೋಪಿಗಳ ಮುಖಚಹರೆಯ ಸ್ಕೆಚ್‌ ಸಿದ್ಧಪಡಿಸಿತ್ತು. ಆ ಸ್ಕೆಚ್‌ಗಳು ಅಕೋಲ್ಕರ್‌ ಮತ್ತು ಪವಾರ್‌ ಅವರನ್ನು ಹೋಲುತ್ತವೆ. ಸಿಬಿಐ ಈಗ ಇದ್ದಕ್ಕಿದ್ದಂತೆಯೇ ಅಂದುರೆಯೇ ದಾಭೋಲ್ಕರ್‌ ಹತ್ಯೆ ಮಾಡಿದ ಹಂತಕ ಎನ್ನುವ ಹೊಸ ಕಥೆ ಹೇಳುತ್ತಿದೆ. ಅಂದುರೆಯ ಮುಖಚಹರೆಯನ್ನು ಸಿಬಿಐ ಸಿದ್ಧಪಡಿಸಿರುವ ಸ್ಕೆಚ್‌ ಹೋಲಿಕೆಯಾಗುವುದಿಲ್ಲ. ತಾವಡೆ ವಿರುದ್ಧ ಮಾತ್ರ ಚಾರ್ಜ್‌ಶೀಟ್‌ ಸಲ್ಲಿಸಲು ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಸಿಬಿಐ ವಕೀಲ ವಿಜಯ್‌ಕುಮಾರ್‌ ಧಕನೆ ‘ಅಕೋಲ್ಕರ್‌ ಮತ್ತು ಪವಾರ್‌ ಅವರೇ ಪ್ರಮುಖ ಹಂತಕರೆಂದು ಸಿಬಿಐ ಎಲ್ಲೂ ಹೇಳಿಲ್ಲ. ಸ್ಕೆಚ್‌ಗಳು ಈ ಇಬ್ಬರು ಆರೋಪಿಗಳಿಗೆ ಶೇಕಡ 50ರಿಂದ 60ರಷ್ಟು ಹೋಲಿಕೆಯಾಗುತ್ತಿವೆ ಎಂದಷ್ಟೇ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ’ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.

ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಸಚಿನ್‌ ಅಂದುರೆಯ ಸಹೋದರ ಪ್ರವೀಣ್‌ ಅಂದುರೆ ‘ನನ್ನ ಒಡಹುಟ್ಟಿದ ಸಹೋದರ ಮುಗ್ಧ. ಆದರೆ, ಈ ಪ್ರಕರಣದಲ್ಲಿ ಆತನನ್ನು ಸುಮ್ಮನೆ ಸಿಕ್ಕಿಹಾಕಿಸಲಾಗುತ್ತಿದೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.