ADVERTISEMENT

ದೆಹಲಿ: ಮೊದಲ ಬಾರಿಗೆ 2,000 ಗಡಿ ದಾಟಿದ ಮೃತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 15:08 IST
Last Updated 21 ಏಪ್ರಿಲ್ 2021, 15:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌–19ನಿಂದಾಗಿ ದೇಶದಲ್ಲಿ ಬುಧವಾರ 2,023 ಜನರು ಮೃತಪಟ್ಟಿದ್ದಾರೆ.

ದೇಶದಲ್ಲಿ ಕೋವಿಡ್‌ ಕಾಣಿಸಿಕೊಂಡಾಗಿನಿಂದ ಈ ವರೆಗೆ ಒಂದು ದಿನದಲ್ಲಿ ಮೃತಪಟ್ಟವರ ಸಂಖ್ಯೆ ಮೊದಲ ಬಾರಿಗೆ 2,000 ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

‘ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 2,023. ಮಹಾರಾಷ್ಟ್ರದಲ್ಲಿ ಗರಿಷ್ಠ 519 ಮಂದಿ ಮೃತಪಟ್ಟಿದ್ದಾರೆ’ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

‘ನಂತರದ ಸ್ಥಾನದಲ್ಲಿ ದೆಹಲಿ (277 ಮಂದಿ ಸಾವು), ಛತ್ತೀಸಗಡ (191), ಉತ್ತರ ಪ್ರದೇಶ (162), ಕರ್ನಾಟಕ (149) ಹಾಗೂ ಗುಜರಾತ್‌ (121) ರಾಜ್ಯಗಳಿವೆ. ಈ ವರೆಗೆ ಈ ಪಿಡುಗಿನಿಂದ ಸಾವನ್ನಪ್ಪಿದವರ ಸಂಖ್ಯೆ 1,82,553’ ಎಂದೂ ತಿಳಿಸಿದೆ.

‘ಸದ್ಯ ದೇಶದಲ್ಲಿ 21,57,000 ಸಕ್ರಿಯ ಪ್ರಕರಣಗಳಿವೆ. ಕಳೆದ ವರ್ಷ ದೇಶದಲ್ಲಿ ವರದಿಯಾಗಿದ್ದ ಕೋವಿಡ್‌–19ನ ಸಕ್ರಿಯ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು ಪ್ರಕರಣಗಳ ಸಂಖ್ಯೆ ಇದು’ ಎಂದು ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ, ಎರಡನೇ ಅಲೆಯ ಈ ಸಂದರ್ಭದಲ್ಲಿ ಮೃತಪಟ್ಟಿರುವವರಲ್ಲಿ 70 ವರ್ಷ ಹಾಗೂ ಅದಕ್ಕೆ ಮೇಲ್ಪಟ್ಟ ವಯೋಮಾನದವರೇ ಹೆಚ್ಚು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.