ಧರ್ಮಶಾಲಾ: ‘ಜನರ ಸೇವೆಗಾಗಿ ಇನ್ನೂ 30ರಿಂದ 40 ವರ್ಷ ಬದುಕಲಿದ್ದೇನೆ’ ಎಂದು ಟಿಬೆಟ್‌ನ ಬೌದ್ಧ ಧರ್ಮೀಯರ ಆಧ್ಯಾತ್ಮಿಕ ಗುರು ದಲೈ ಲಾಮಾ ತಿಳಿಸಿದ್ದಾರೆ. ಆ ಮೂಲಕ ಉತ್ತರಾಧಿಕಾರಿ ಆಯ್ಕೆ ಮೂಲಕ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.
ಭಾನುವಾರ 90ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಅವರು ಇಲ್ಲಿನ ಮೆಕ್ಲೌಡ್ ಗಾಂಜ್ ಮುಖ್ಯ ದಲೈ ಲಾಮಾ ದೇವಾಲಯದಲ್ಲಿ ಶನಿವಾರ ದೀರ್ಘಾಯುಸ್ಸಿಗಾಗಿ ಹಮ್ಮಿಕೊಂಡಿರುವ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು.
‘ನಾನು ಅನೇಕ ಭವಿಷ್ಯವಾಣಿಗಳನ್ನು ನೋಡಿದ್ದೇನೆ. ನನಗೆ ಅವಲೋಕಿತೇಶ್ವರ (ಬೌದ್ಧ ಧರ್ಮದ ಪ್ರಕಾರ, ವಿಶ್ವದ ದೇವರು) ಅವರ ಆಶೀರ್ವಾದ ಇದೆ ಎಂದು ನಂಬಿದ್ದೇನೆ. ಇದುವರೆಗೂ ನಾನು ಅತ್ಯುತ್ತಮ ಕೆಲಸಗಳನ್ನು ಮಾಡಿದ್ದೇನೆ. ಇನ್ನೂ 30ರಿಂದ 40 ವರ್ಷ ಬದುಕಲಿದ್ದೇನೆ. ನಿಮ್ಮ ಆಶೀರ್ವಾದದಿಂದಲೇ ಎಲ್ಲವೂ ಸಾಧ್ಯವಾಗಿದೆ’ ಎಂದರು.
ಲಾಮಾ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮ ಅನುಸರಿಸುತ್ತಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ರಾಜೀವ್ ರಂಜನ್ ಸಿಂಗ್, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಫೆಮಾ ಖಂಡು, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಹಾಲಿವುಡ್ ನಟ ರಿಚರ್ಡ್ ಗೇರ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.
‘ಬಾಲ್ಯದಿಂದಲೂ ಅವಲೋಕಿತೇಶ್ವರರ ಜೊತೆಗೆ ಬಲವಾದ ಸಂಬಂಧ ಹೊಂದಿರುವುದು ನನಗೆ ಅನುಭವಕ್ಕೆ ಬಂದಿದೆ. ಆದ್ದರಿಂದಲೇ ಬೌದ್ಧ ಧರ್ಮದ ಸೇವೆ ಮಾಡುತ್ತಿದ್ದು, ಟಿಬೆಟ್‌ನ ಪರಿಸ್ಥಿತಿಯಲ್ಲಿಯೂ ಸುಧಾರಿಸಿದೆ. ಈಗಲೂ ನಾನು 130 ವರ್ಷದವರೆಗೂ ಬದುಕಲಿದ್ದೇನೆ ಎಂದು ನಂಬಿದ್ದೇನೆ’ ಎಂದು ತಿಳಿಸಿದರು.
‘ನಾವು ದೇಶವನ್ನು ಕಳೆದುಕೊಂಡೆವು. ಟಿಬೆಟ್‌ನಿಂದ ದೇಶಾಂತರ ಹೊಂದಿ ಭಾರತದಲ್ಲಿ ಬದುಕುತ್ತಿದ್ದೇವೆ. ಇಲ್ಲಿಯೇ ನಾನು ಸಾಕಷ್ಟು ಕೆಲಸ ಮಾಡಲು ಸಾಧ್ಯವಾಯಿತು. ಧರ್ಮಶಾಲಾದಲ್ಲಿ ಬದುಕಿರುವವರಿಗಾಗಿ ನನ್ನಿಂದ ಸಾಧ್ಯವಿರುವಷ್ಟು ಒಳ್ಳೆಯದನ್ನು ಮಾಡಲು ಬಯಸುತ್ತೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.